ತಟ್ಟೆಯಲ್ಲಿ ಅನ್ನ ಬಿಟ್ಟು ಹೋಗುತ್ತಿದ್ದ ಭಕ್ತನನ್ನು ತಡೆದ ಸಿದ್ಧಗಂಗಾ ಮಠದ ಬಾಲಕ ಹೇಳಿದ್ದೇನು ಗೊತ್ತೆ?

ಬೆಂಗಳೂರು: ನಡೆದಾಡುವ ದೈವ ಎಂದೇ ಕರೆಸಿಕೊಳ್ಳುತ್ತಿದ್ದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ದಿನ ಕಳೆದಿದೆ. 500 ಮಂದಿ ವಿದ್ಯಾರ್ಥಿಗಳೊಂದಿಗೆ ಶ್ರೀಗಳು ಮಠ ಆರಂಭಿಸಿದಾಗ ಊರೂರಿಗೆ ತೆರಳಿ, ಆಹಾರ ಪದಾರ್ಥವನ್ನು ಸಂಗ್ರಹಿಸಿ ಮಠವನ್ನು ಕಟ್ಟಿ ಬೆಳೆಸಿದ್ದರು. ಇಂದು ಈ ಮಠದಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಶ್ರೀಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಜೊತೆಗೆ ಅನ್ನದ ಮಹತ್ವವನ್ನು ತಿಳಿಸಿಕೊಡುತ್ತಿದ್ದರು ಎಂಬುದಕ್ಕೆ ಇಂದು ನಡೆದ ಈ ಘಟನೆ ಸಾಕ್ಷಿಯಾಗಿದೆ.

ಶ್ರೀಗಳ ಅಂತಿಮ ದರ್ಶನ ಪಡೆಯಲು ಮಠಕ್ಕೆ ಲಕ್ಷಾಂತರ ಭಕ್ತರು ಬಂದಿದ್ದರು. ಬರುವ ಎಲ್ಲ ಭಕ್ತಾದಿಗಳು ಹಸಿದ ಹೊಟ್ಟೆಯಲ್ಲಿ ಇರಬಾರದು, ಅವರೆಲ್ಲರಿಗೂ ಅನ್ನ ದಾಸೋಹ ಮಾಡಬೇಕು ಎಂಬುದೇ ಶ್ರೀಗಳ ಆಸೆಯಾಗಿತ್ತು. ಅದರಂತೆ ಇಂದು ಬಂದಿದ್ದ ಭಕ್ತರಿಗೂ ಅನ್ನ ದಾಸೋಹ ಮಾಡಲಾಗಿತ್ತು. ಈ ವೇಳೆ ಪ್ರಸಾದ ಸೇವಿಸಿದ ಭಕ್ತರೊಬ್ಬರು ತಟ್ಟೆಯಲ್ಲಿ ಅನ್ನವನ್ನು ಬಿಟ್ಟು, ಅದನ್ನು ಕೆಳಗೆ ಇಟ್ಟು ಹೋಗುತ್ತಿದ್ದಾಗ ಅಲ್ಲೇ ಇದ್ದ ಮಠದ ವಿದ್ಯಾರ್ಥಿಯೊಬ್ಬ ಆ ತಟ್ಟೆಯನ್ನು ಎತ್ತಿಕೊಂಡು ಮತ್ತೆ ಅವರ ಕೈಗಿಟ್ಟು, ಪೂರ್ತಿ ತಿನ್ನುವಂತೆ ಮನವಿ ಮಾಡಿಕೊಂಡಿದ್ದಾನೆ. ಇಲ್ಲಪ್ಪ ಸಾಕು, ಹೊಟ್ಟೆ ತುಂಬಿದೆ, ಇಷ್ಟನ್ನು ತಿನ್ನಲು ಶಕ್ತಿಯಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಆ ವಿದ್ಯಾರ್ಥಿ, ಪ್ರಸಾದ ಬಿಟ್ಟರೆ ಮತ್ತೆ ಪ್ರಸಾದ ಸಿಗುವುದಿಲ್ಲ. ಊಟ ಮಾಡಿದರಲ್ಲವೇ ಶಕ್ತಿ ಬರುವುದು. ಯಾವುದೇ ಕಾರಣಕ್ಕೂ ಅನ್ನವನ್ನು ವೇಸ್ಟ್​ ಮಾಡಬೇಡಿ, ಹೊಟ್ಟೆ ತುಂಬಾ ಊಟ ಮಾಡಿ ಎಂದು ಹೇಳಿದ್ದಾನೆ. ಆ ವ್ಯಕ್ತಿ ಎಷ್ಟೇ ಹೇಳಿದರೂ ವಿದ್ಯಾರ್ಥಿ ಮಾತ್ರ ಅನ್ನವನ್ನು ಎಸೆಯಲು ಸುತಾರಾಂ ಒಪ್ಪದೆ ಪೂರ್ತಿ ಊಟ ಮಾಡುವಂತೆ ಮಾಡಿದ್ದಾನೆ.

ವಿದ್ಯಾರ್ಥಿ ಮತ್ತು ಭಕ್ತನೊಂದಿಗೆ ನಡೆದ ಸಂಭಾಷಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿದ್ಯಾರ್ಥಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ತುತ್ತು ಅನ್ನದ ಮಹತ್ವವನ್ನು ಬುದ್ಧಿಯವರು (ಶಿವಕುಮಾರ ಸ್ವಾಮೀಜಿ) ಎಷ್ಟು ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ವಿದ್ಯಾರ್ಥಿ ಮತ್ತು ಭಕ್ತನೊಂದಿಗೆ ನಡೆದ ಸಂಭಾಷಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿದ್ಯಾರ್ಥಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ತುತ್ತು ಅನ್ನದ ಮಹತ್ವವನ್ನು ಬುದ್ಧಿಯವರು (ಶಿವಕುಮಾರ ಸ್ವಾಮೀಜಿ) ಎಷ್ಟು ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ