ರೆಸಾರ್ಟ್​ ಹಲ್ಲೆ ಪ್ರಕರಣ; ಕಾಂಗ್ರೆಸ್​ ನಾಯಕರಿಗೆ ಹೈಕಮಾಂಡ್​ ತರಾಟೆ; ಆರೋಪಿ ಶಾಸಕನ ನೆರವಿಗೆ ಧಾವಿಸದಂತೆ ಸೂಚನೆ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಕಂಪ್ಲಿ ಶಾಸಕ ಜೆಎನ್​ ಗಣೇಶ್​ ಹಲ್ಲೆ ನಡೆಸಿರುವುದು ರಾಜ್ಯ ನಾಯಕರಿಗೆ ಮಾತ್ರವಲ್ಲದೇ, ಹೈಕಮಾಂಡ್​ಗೂ ಮುಜುಗರ ಉಂಟಾಗಿದೆ. ಯಾವುದೇ ಕಾರಣಕ್ಕೂ ಗಣೇಶ್​ ಪರ ಯಾರು ನಿಲ್ಲದಂತೆ ರಾಜ್ಯ ಸಚಿವರಿಗೆ ಹೈ ಕಮಾಂಡ್​ ತಾಕೀತು ಮಾಡಿದೆ.

ಲೋಕಸಭಾ ಚುನಾವಣೆ ಮುಂದೆ ನಡೆದ ಶಾಸಕರ ಈ ಮಾರಾಮಾರಿ ಪ್ರಕರಣದಿಂದಾಗಿ ಹೈ ಕಮಾಂಡ್​​ಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟಾಗಿದೆ. ಈ ರೀತಿಯ ಪ್ರಕರಣ ಯಾಕೆ ಆಯಿತು ಎಂದು ರಾಜ್ಯ ನಾಯಕರಿಗೆ ಹೈ ಕಮಾಂಡ್​​ ತರಾಟೆ ತೆಗೆದುಕೊಂಡಿದೆ.  ಅಮಾನತು ಆಗಿರುವ ಶಾಸಕರ ರಕ್ಷಣೆಗೆ ನಾವು ಈಗ ನಿಂತರೆ ಮತ್ತೆ ನಮಗೆ ತೊಂದರೆಯಾಗಲಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ಶಾಸಕನ ರಕ್ಷಣೆಗೆ ಯಾರು ಧಾವಿಸದಂತೆ ಸೂಚನೆ ನೀಡಿದೆ, ಅಮಾನತು ಆಗಿರುವ ಶಾಸಕನ ಯಾವುದೇ ನಾಯಕರ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅವರು ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೇ ಎಫ್​ಐಆರ್​ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಶಾಸಕ ಎಲ್ಲಿದ್ದರೂ ಆತನನ್ನು ಪೊಲೀಸರ ಕೈಗೆ ಒಪ್ಪಿಸುವಂತೆ ಡಿಕೆ ಶಿವಕುಮಾರ್​ಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಸಿಟಿವಿ ವಶಕ್ಕೆ
ಈಗಲ್​ಟನ್ ರೆಸಾರ್ಟ್​ಗೆ ತೆರಳಿದ್ದ ಬಿಡದಿ ಪೊಲೀಸರು ಗಲಾಟೆಯಾಗಿದ್ದ ಜಾಗದ ಮತ್ತೊಂದು ಸಿಸಿಟಿವಿ ವಶಕ್ಕೆ ಪಡೆದಿದ್ದು, ಈ ಕುರಿತು ತನಿಖೆ ಮುಂದುವರೆಸಿದ್ದಾರೆ.  ನಾಪತ್ತೆಯಾಗಿರುವ ಜೆ.ಎನ್​.ಗಣೇಶ್​ಗಾಗಿ ಹುಡುಕಾಟ ನಡೆಸಿದ್ದು ಮೂರು ತಂಡಗಳಲ್ಲಿ ಪೊಲೀಸರಿಂದ ತೀವ್ರ ಶೋಧ ಆರಂಭವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ