ಮೈಸೂರು, ಜ.23-ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ಹಮ್ಮಿಕೊಂಡರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೃಷ್ಣಭೆರೇಗೌಡ ಅವರು ಬೆಳಿಗ್ಗೆ ಎಲ್ಲ ಜಿಲ್ಲೆಗಳ ಸಿಇಒಗಳ ಸಭೆ ನಡೆಸಿ ರಾಜ್ಯದ ವಿವಿಧೆಡೆ ಉಂಟಾಗಿರುವ ಬರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು.
ಈಗಾಗಲೇ ಬರಪರಿಸ್ಥಿತಿ ಇರುವ ಕಡೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ತಾತ್ವರವಾಗಿದೆ.ಇನ್ನೇನು ಬೇಸಿಗೆ ಕಾಲಿಡಲಿದೆ.ಆದ್ದರಿಂದ ತಕ್ಷಣ ಸಮಾರೋಪಾದಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ಸಿಇಒಗಳಿಗೆ ಸಚಿವರು ಸೂಚಿಸಿದರು.
ಕೆಟ್ಟು ಹೋಗಿರುವ ಬೋರ್‍ವೆಲ್‍ಗಳನ್ನು ಸರಿಪಡಿಸಬೇಕು.ಜಾನುವಾರುಗಳಿಗೆ ಮೇವು ಸಿಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.ರೈತರಿಗೆ ಯಾವುದೇ ಭಾಗದಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ಆದೇಶಿಸಿದರು.
ಭತ್ತ ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೊಂದರೆ ಆಗಬಾರದು, ಯಾವುದೇ ಕಾರಣಕ್ಕೂ ರೈತರಿಗೆ ಅಧಿಕಾರಿಗಳು ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ನಾಳೆ ಕಾರ್ಯಾಗಾರ: ನಾಳೆ ಎಚ್.ಡಿ.ಕೋಟೆ ತಾಲೂಕು ಕಬಿನಿ ಜಂಗಲ್ ಲಾಡ್ಜ್‍ನಲ್ಲಿ ಗ್ರಾಮೀಣಾಭಿವೃದ್ಧಿ ವಿಷಯ ಕುರಿತು ಕಾರ್ಯಾಗಾರ ಏರ್ಪಡಿಸಿದ್ದು, ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ.