ಬೆಂಗಳೂರು, ಜ.23- ಟಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮ ತಿರುಮಕೂಡಲಿನಲ್ಲಿ ಫೆ.17 ರಿಂದ 19ರವರೆಗೆ 11ನೇ ಕುಂಭ ಮೇಳ ನಡೆಯಲಿದ್ದು, ಇದು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಇದು ನಾಡಿನ ಕಾರ್ಯಕ್ರಮವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದಲ್ಲಿ ನಡೆದ ಟಿ.ನರಸೀಪುರದಲ್ಲಿ ನಡೆಯಲಿರುವ ಕುಂಭ ಮೇಳದ ಪೂರ್ವ ಸಿದ್ಧತಾ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕುಂಭ ಮೇಳದ ಸಂದರ್ಭದಲ್ಲಿ ನದಿಗಳ ಪಾವಿತ್ರತ್ಯತೆಯನ್ನು ಕಾಪಾಡುವ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮವೂ ಆಗಲಿದೆ. ಕೇವಲ ದೇಹ ಶುಚಿ ಮಾಡುವುದಷ್ಟೇ ಅಲ್ಲ, ಮನ ಶುಚಿಗೊಳಿಸುವ ಕಾರ್ಯವೂ ಆಗಲಿದೆ. ನದಿ ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ಆಗಲಿದೆ.
ಭಾರತದಲ್ಲಿರುವ ಧರ್ಮವು ಜಗತ್ತಿಗೆ ಜ್ಯೋತಿಯನ್ನು ನೀಡಿದೆ. ನಮ್ಮ ಮುಖ್ಯಮಂತ್ರಿಗಳು ನಾಡಿನ ಪ್ರಜೆಗಳ ಆರ್ಥಿಕತೆಯನ್ನು ಗೌರವಿಸುವ ಮುಖ್ಯಮಂತ್ರಿಗಳಾಗಿದ್ದಾರೆ. ನಗರ ಪ್ರದೇಶಗಳ ಸೌಂದರ್ಯಕ್ಕೆ ಧಕ್ಕೆ ತರುವಂತಹ ದೊಡ್ಡ ದೊಡ್ಡ ಕಟ್ಟಡ ಕಟ್ಟುವಾಗ ಪ್ರಶ್ನೆ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಂಭ ಮೇಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಸಮಾಲೋಚನಾ ಸಭೆಗಳನ್ನು ನಡೆಸಿದ್ದು, ಈಗ ಅಂತಿಮ ಘಟ್ಟದ ಸಭೆಯನ್ನು ನಡೆಸಿ ಸಚಿವರು, ಶಾಸಕರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಫೆ.17 ರಿಂದ 19 ರವರೆಗೆ ನಡೆಯಲಿರುವ ಕುಂಭ ಮೇಳ ವಿಶೇಷ ಗೌರವವನ್ನು ತಂದುಕೊಡಲಿದೆ ಎಂಬ ವಿಶ್ವಾಸವಿದೆ. ಉತ್ತರ ಭಾರತದಲ್ಲಿ ನಡೆಯುವ ರೀತಿಯಲ್ಲೇ ದಕ್ಷಿಣ ಭಾರತದಲ್ಲೂ ಕುಂಭ ಮೇಳವನ್ನು ಎಲ್ಲ ಧಾರ್ಮಿಕ ಸಂಸ್ಥೆಗಳು ಒಟ್ಟಾಗಿ ಮಾಡಬೇಕಾಗಿದೆ. ಅದಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಮತ್ತು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕಾಗಿದೆ ಎಂಧು ಸಲಹೆ ಮಾಡಿದರು.
ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಮಾತನಾಡಿ, ಪ್ರಯಾಗದಲ್ಲಿರುವ ಪುಣ್ಯಕ್ಷೇತ್ರದ ಲಕ್ಷಣಗಳು ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲೂ ಇದೆ. ಯಾಗ, ಯಜ್ಞ, ಹೋಮಗಳನ್ನು ನಿಯಮಿತವಾಗಿ ನಡೆಸಬೇಕು. ಯಾಗ ಶಾಲೆಯನ್ನು ನಿರ್ಮಾಣ ಮಾಡಬೇಕಾಗಿದೆ. ಗುಂಜಾ ನರಸಿಂಹಸ್ವಾಮಿ ದೇವಾಲಯ ಸೇರಿದಂತೆ ತ್ರಿವೇಣಿ ಸಂಗಮದಲ್ಲಿರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಬೇಕಿದೆ. ಅಲ್ಲದೆ, ವಿಷ್ಣುಪಾದ, ಸ್ಫಟಿಕ ಸರೋವರಗಳನ್ನು ಗುರುತಿಸುವಂತಹ ಕೆಲಸ ಆಗಬೇಕಿದೆ ಎಂದು ಹೇಳಿದರು.