ಬೆಂಗಳೂರು, ಜ.23-ಉತ್ತರ ಭಾರತದ ಪ್ರಯಾಗದ ಕುಂಭ ಮೇಳದ ಮಾದರಿಯಲ್ಲೇ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಸಲು ಉದ್ದೇಶಿಸಿರುವ ಕುಂಭಮೇಳಕ್ಕೆ ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರು.
ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದಲ್ಲಿ ಟಿ.ನರಸೀಪುರದಲ್ಲಿ ನಡೆಯಲಿರುವ ಕುಂಭ ಮೇಳದ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಂಭ ಮೇಳ ಆಯೋಜಿಸಲು ಹಣದ ಕೊರತೆ ಇಲ್ಲ. ಹಣಕ್ಕಾಗಿ ಕಾಯುವ ಅಗತ್ಯವೂ ಇಲ್ಲ. ತಾತ್ಕಾಲಿಕ ಕಾರ್ಯಗಳಿಗಿಂತ ಮೂಲ ಸೌಲಭ್ಯ ಕಲ್ಪಿಸುವ ಶಾಶ್ವತ ಕಾರ್ಯಗಳಿಗೆ ನೀಲನಕ್ಷೆ ಸಿದ್ಧಪಡಿಸಲು ತಿಳಿಸಿದರು.
ಕುಂಭ ಮೇಳಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸೋಪಾನಕಟ್ಟೆ, ರಸ್ತೆ ದುರಸ್ತಿ, ತಂಗುವ ವ್ಯವಸ್ಥೆ, ಶೌಚಾಲಯ, ಸಾರಿಗೆ ವ್ಯವಸ್ಥೆ ಎಲ್ಲವೂ ಉತ್ತಮ ರೀತಿಯಲ್ಲಿರಬೇಕು. ತಮಿಳುನಾಡು ಆಂಧ್ರ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಭಕ್ತರು ದೊಡ್ಡ ಪ್ರಮಾಣದಲ್ಲಿ ಆಗಮಿಸುವ ನಿರೀಕ್ಷೆ ಇದೆ. ಬಂದಂತಹ ಪ್ರತಿಯೊಬ್ಬ ಭಕ್ತರು ಒಳ್ಳೆಯ ವ್ಯವಸ್ಥೆ ಮಾಡಲಾಗಿತ್ತು ಎಂದು ನೆಮ್ಮದಿಯಿಂದ ಹೋಗಬೇಕು.
ದಕ್ಷಿಣ ಭಾರತದಲ್ಲಿ ನಡೆಯುವ ಕುಂಭ ಮೇಳೆ ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಪೂರ್ವಸಿದ್ಧತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮೈಸೂರು ಹಾಗೂ ಮಂಡ್ಯ ಜಿಲ್ಲಾಡಳಿತಕ್ಕೆ, ಎರಡೂ ಜಿಲ್ಲೆಗಳ ಸಚಿವರು, ಶಾಸಕರಿಗೆ ನಿರ್ದೇಶನ ನೀಡಿದರು.
ಕುಂಭ ಮೇಳಕ್ಕೆ ಯಾವುದೇ ಮಿತಿಯನ್ನು ವಿಧಿಸುವುದಿಲ್ಲ. ಗುಣಾತ್ಮಕವಾಗಿ ಕುಂಭ ಮೇಳ ನಡೆಯಬೇಕು. ಆ ಭಾಗದ ನಾಲ್ವರು ಮಂತ್ರಿಗಳು ಪರಸ್ಪರ ಸಮನ್ವಯ ಸಾಧಿಸಿ ಅತ್ಯಂತ ಯಶಸ್ವಿಯಾಗಿ ಉತ್ತಮ ರೀತಿಯಲ್ಲಿ ಕುಂಭ ಮೇಳ ನಡೆಯುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು.
ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಯ ಶಾಸಕರು ಕುಂಭ ಮೇಳಕ್ಕೆ ಅಗತ್ಯವಿರುವ ಶಾಶ್ವತ ಕಾರ್ಯಗಳ ನೀಲನಕ್ಷೆ ಸಿದ್ಧಪಡಿಸಬೇಕು ಎಂದು ಹೇಳಿದರು.
ಭಕ್ತಾದಿಗಳು, ಧಾರ್ಮಿಕ ಗುರುಗಳು ತಂಗಲು ಒಳ್ಳೆಯ ರೀತಿಯ ಕುಟೀರಗಳ ವ್ಯವಸ್ಥೆ ಆಗಬೇಕು. ದೇವಾಲಯದ ಜೀರ್ಣೋದ್ಧಾರಕ್ಕೆ ತಕ್ಷಣವೇ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಕಳುಹಿಸಿದರೆ ಎರಡು ಮೂರು ದಿನಗಳಲ್ಲಿ ಅನುಮೋದನೆ ನೀಡುವ ಭರವಸೆ ನೀಡಿದರು.
ಪ್ರಯಾಗದಲ್ಲಿ ನಡೆದ ಕುಂಭ ಮೇಳಕ್ಕೆ 4,200 ಕೋಟಿ ರೂ. ವೆಚ್ಚ ಮಾಡಿರುವ ಮಾಹಿತಿ ಗಮನಿಸಿದ್ದೇನೆ. ಟಿ.ನರಸೀಪುರದ ಕುಂಭ ಮೇಳಕ್ಕೂ ಯಾವುದೇ ರೀತಿಯಲ್ಲೂ ಕಡಿಮೆಯಾಗದಂತೆ ಗಮನಹರಿಸಲು ಸೂಚಿಸಿದರು.
ಕಳೆದ 30 ವರ್ಷಗಳಿಂದ 3 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತಿದೆ. ಈ ಬಾರಿ 156 ತಾಲೂಕುಗಳಲ್ಲಿ ಬರಗಾಲವಿದೆ. ದೇವರ ಆಶೀರ್ವಾದದಿಂದ ಮುಂದಿನ ವರ್ಷ ಉತ್ತಮ ಮಳೆ, ಬೆಳೆಯಾಗಬೇಕು ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಿನ್ನೆ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಕ್ರಿಯಾ ಸಮಾಧಿ ಕಾರ್ಯದಲ್ಲಿ ಉತ್ತಮ ರೀತಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಮೈಸೂರು ದಸರಾ ಉತ್ಸವವನ್ನು ಯಶಸ್ವಿಗೊಳಿಸಿದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ತಕ್ಷಣವೇ ಕಾರ್ಯನಿರ್ವಹಿಸಬೇಕು. ಮೂರ್ನಾಲ್ಕು ದಿನದಲ್ಲಿ ಮತ್ತೆ ಕುಂಭ ಮೇಳ ನಡೆಯುವ ಸ್ಥಳದಲ್ಲೇ ಸಭೆ ಕರೆದು ತೀರ್ಮಾನ ಕೈಗೊಳ್ಳೋಣ. ಗೃಹ, ಆರೋಗ್ಯ, ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಗಳನ್ನು ಪ್ರಾರಂಭಿಸಬೇಕೆಂದು ಆದೇಶಿಸಿದರು.
ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಉತ್ತರ ಭಾರತದ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ನಡೆಯುವ ಈ ಕುಂಭ ಮೇಳಕ್ಕೆ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಲು ನಾಳೆಯಿಂದಲೇ ಚಾಲನೆ ನೀಡಲಾಗುವುದು. ಅತ್ಯುತ್ತಮವಾಗಿ ಕುಂಭ ಮೇಳ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಮೂಗೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಕುಂಭ ಮೇಳ ನಡೆಸುವುದರಿಂದ ಸರ್ಕಾರದ ಹಣ ಖರ್ಚಾಗಲಿದೆ ಎಂಬ ಚರ್ಚೆ ಬೇಡ. ವ್ಯಾಪಾರ, ವ್ಯವಹಾರ, ಅಭಿವೃದ್ಧಿಯೂ ಆಗುತ್ತದೆ. ಸಮಯದ ಅಭಾವವಿರುವುದರಿಂದ ಈ ಬಾರಿ ತಾತ್ಕಾಲಿಕ ಕೆಲಸಗಳಿಗೆ ಆದ್ಯತೆ ನೀಡಿ. ಮುಂದಿನ ವರ್ಷದಿಂದ ದೇವಾಲಯದ ಜೀರ್ಣೋದ್ಧಾರ ಸೇರಿದಂತೆ ಶಾಶ್ವತ ಕಾರ್ಯಗಳಿಗೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ಕುಂಭ ಮೇಳಕ್ಕೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸಭೆ ಪ್ರಾರಂಭಕ್ಕೂ ಮುನ್ನ ಸಿದ್ದಗಂಗಾ ಶ್ರೀಗಳಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಸಭೆಯಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಸಂಸದ ಎಲ್.ಆರ್.ಶಿವರಾಮೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕರಾದ ಡಾ.ಅನ್ನದಾನಿ, ಡಾ.ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್ಕುಮಾರ್, ಎಚ್.ವಿಶ್ವನಾಥ್, ಶ್ರೀನಿವಾಸ್, ನಾರಾಯಣಗೌಡ, ಗೋಪಾಲಯ್ಯ, ಸುರೇಶ್ಗೌಡ, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಅಪ್ಪಾಜಿಗೌಡ ಮತ್ತಿತರರು ಉಪಸ್ಥಿತರಿದ್ದರು.