ಶ್ರೀಗಳು ಶಿವೈಕ್ಯರಾದ ಗದ್ದುಗೆ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರ ದಂಡು

ತುಮಕೂರು, ಜ.23- ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಗದ್ದುಗೆ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಶ್ರೀಗಳ ಸಮ್ಮುಖದಲ್ಲಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಗದ್ದುಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಕಿರಿಯ ಶ್ರೀಗಳು ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಅಭಿಷೇಕ, ಮಂತ್ರ ಪಠನೆ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಸಿದ್ಧಗಂಗೆಯ ಉದ್ಧಾನ ಶಿವಯೋಗಿಗಳ ಗದ್ದುಗೆಯಲ್ಲಿ ಪೂಜೆ ನಡೆಸಿದ ಬಳಿಕ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿದರು.

ನಿನ್ನೆ ಶ್ರೀಗಳ ಲಿಂಗ ಶರೀರದ ದರ್ಶನಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ದರ್ಶನ ಭಾಗ್ಯ ಸಿಗದ ಹಿನ್ನೆಲೆಯಲ್ಲಿ ಭಕ್ತರಿಗೆ ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಸರದಿ ಸಾಲಿನಲ್ಲಿ ನಿಂತು ಭಕ್ತರು ಗದ್ದುಗೆಗೆ ನಮಸ್ಕರಿಸಿ ದರ್ಶನ ಪಡೆದುಕೊಂಡರು.

ಪ್ರಸಾದ ನಿಲಯದ ಪಕ್ಕದಲ್ಲಿರುವ ಸಿದ್ಧಗಂಗಾ ಶ್ರೀಗಳು ಆಸೀನರಾಗುತ್ತಿದ್ದ ವೇದಿಕೆಯ ದರ್ಶನವನ್ನು ಸಹ ಭಕ್ತರು ಪಡೆದುಕೊಂಡರು.ನಿನ್ನೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಅಪಾರ ಭಕ್ತರು ಮಠದ ಆವರಣದಲ್ಲಿ ಉಳಿದುಕೊಂಡು ಇಂದು ಗದ್ದುಗೆ ದರ್ಶನಕ್ಕೆ ಕಾತರಿಸಿದ್ದರು.

11 ದಿನಗಳ ಕಾಲ ಗದ್ದುಗೆಗೆ ನಿರಂತರವಾಗಿ ಪೂಜೆ ನಡೆಯಲಿದೆ.ವಿವಿಧ ಮಠಾಧೀಶರು ಪ್ರತಿದಿನ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.11 ದಿನಗಳ ಬಳಿಕ ಶ್ರೀಗಳ ಕ್ರಿಯಾಸಮಾಧಿ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲಾಗುವುದು.

ಮಠದ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ದುಃಖದಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತರಗತಿಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.
ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಶ್ರೀಮಠದಲ್ಲಿ ಪೊಲೀಸರ ಭದ್ರತೆ ಕಲ್ಪಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ