ಬೆಂಗಳೂರು, ಜ.23- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲಕ ಇಡೀ ದೇಶದ ಗೌರವವನ್ನು ಎತ್ತರಕ್ಕೇರಿಸಿದ ಖ್ಯಾತ ವಿದ್ವಾಂಸ, ಭಾರತ ರತ್ನ ಪಂಡಿತ ಭೀಮಸೇನ ಜೋಷಿಯವರ ಗೌರವಾರ್ಥ ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ನಾಳೆ (ಜ.24) 8ನೆ ವರ್ಷದ ಸ್ಮರಣಾಂಜಲಿ ಭೀಮನಮನ ಕಾರ್ಯಕ್ರಮ ಜರುಗಲಿದೆ.
ನಾಳೆ ಸಂಜೆ 6 ಗಂಟೆಗೆ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ನಾಡಿನ ಹೆಮ್ಮೆಯ ಗಾಯಕಿ, ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ದಾಸವಾಣಿ ಹಾಗೂ ಸಂತವಾಣಿ ಕಾರ್ಯಕ್ರಮ ಜರುಗಲಿದೆ.
ಕಳೆದ ಏಳು ವರ್ಷಗಳಿಂದ ದಿ.ಪಂಡಿತ್ ಭೀಮಸೇನ ಜೋಷಿಯವರ ಗೌರವಾರ್ಥ ನಗರದ ಪ್ರತಿಷ್ಠಿತ ವಸತಿ ಸಂಸ್ಥೆ ನಿರ್ಮಾಣ್ ಶೆಲ್ಟರ್ಸ್ (ಬೆಂ.) ಪ್ರೈ.ಲಿ. ಪ್ರಾಯೋಜಿತ ವಿಎಲ್ಎನ್ ನಿರ್ಮಾಣ್ ಪುರಂದರ ಪ್ರತಿಷ್ಠಾನ ಮುಖಾಂತರ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ನಾಳೆ ಎಂಟನೆ ವರ್ಷದ ಭೀಮ ನಮನ ಸ್ಮರಣಾಂಜಲಿ ಕಾರ್ಯಕ್ರಮ ಏರ್ಪಡಿಸಿದೆ.
ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಹೆಸರಲ್ಲಿ ನಾಡಿನ ಶಾಸ್ತ್ರೀಯ ಸಂಗೀತ ಕ್ಷೇತ್ರದ ವಿದ್ವಾಂಸರಿಗೆ ಪ್ರತಿ ವರ್ಷ ವಿಎಲ್ಎನ್ ನಿರ್ಮಾಣ್ ಪುರಂದರ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.