ವ್ಯಕ್ತಿಯೊಬ್ಬನಿಗೆ ಅನ್ನದ ಮಹತ್ವ ತಿಳಿಸಿಕೊಟ್ಟ ಮಠದ ವಿದ್ಯಾರ್ಥಿ

ತುಮಕೂರು, ಜ.23- ತುತ್ತು ಅನ್ನಕ್ಕೂ ಹಲವಾರು ಮಂದಿ ತುಂಬಾ ಕಷ್ಟಪಡ್ತಾರೆ.ತಟ್ಟೆಗೆ ಅನ್ನ ಹಾಕಿಸಿಕೊಂಡು ಎಸೆದು ಹೋಗ್ತೀರಾ. ಮೊದಲು ತಟ್ಟೆಯಲ್ಲಿರುವ ಅನ್ನವನ್ನು ಸಂಪೂರ್ಣವಾಗಿ ಊಟ ಮಾಡಿ ಎಂದು ಪ್ರಸಾದವನ್ನು ಎಸೆಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಠದ ವಿದ್ಯಾರ್ಥಿಯೊಬ್ಬ ಅನ್ನದ ಮಹತ್ವ ತಿಳಿಸಿದ ಪ್ರಸಂಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಹಿನ್ನೆಲೆಯಲ್ಲಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೋಸ್ಕರ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಟ್ಟೆಯಲ್ಲಿ ಅನ್ನವನ್ನು ಹಾಕಿಸಿಕೊಂಡು ವ್ಯರ್ಥ ಮಾಡುತ್ತಿದ್ದಾಗ ಇದನ್ನು ಗಮನಿಸಿದ ವಿದ್ಯಾರ್ಥಿ ತಿಳಿ ಹೇಳಿದ ಪ್ರಸಂಗ.

ಶ್ರೀ ಮಠದ ದಾಸೋಹ ನಮ್ಮೆಲ್ಲರಿಗೆ ದಾರಿ ದೀಪವಾಗಿದೆ.ಶ್ರೀಗಳು ನೀಡಿದ ಮಾರ್ಗದಲ್ಲಿ ನಡೆದ ಮಕ್ಕಳಿಗೆ ನಿಜವಾಗಿಯೂ ತುತ್ತು ಅನ್ನದ ಬೆಲೆ ಏನು ಎಂಬುದು ಗೊತ್ತಿದೆ.ಆದರೆ ವ್ಯಕ್ತಿಯೊಬ್ಬ ಪ್ರಸಾದದ ಬೆಲೆಯೇ ಗೊತ್ತಿಲ್ಲದೆ ಅರ್ಧ ಸೇವಿಸಿ ಉಳಿದ ಅನ್ನವನ್ನು ತ್ಯಾಜ್ಯದ ಬುಟ್ಟಿಗೆ ಹಾಕಲು ಹೋದಾಗ ಅಲ್ಲಿಯೇ ಕಾರ್ಯ ಮಾಡುತ್ತಿದ್ದ ಮಠದ ವಿದ್ಯಾರ್ಥಿಯೊಬ್ಬ ಗಮನಿಸಿ ಆ ತಟ್ಟೆಯನ್ನು ತೆಗೆದುಕೊಂಡು ಅನ್ನವನ್ನು ಹೀಗೆ ಬಿಸಾಕುತ್ತೀರಲ್ಲಾ ಸ್ವಾಮಿ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಾವಿರಾರು ಮಂದಿ ಊಟವಿಲ್ಲದೆ ಪರದಾಡುತ್ತಿದ್ದಾರೆ.ಇಂತಹ ಸಮಯದಲ್ಲಿ ಅನ್ನವನ್ನು ವ್ಯರ್ಥ ಮಾಡುತ್ತೀರಲ್ಲಾ. ಹೊಟ್ಟೆ ತುಂಬಾ ಊಟ ಮಾಡಿ ಎಂದು ತಿಳಿ ಹೇಳಿದ್ದಾನೆ.

ಆ ವ್ಯಕ್ತಿ ಅನ್ನಕ್ಕೆ ಸಾಂಬಾರಿಲ್ಲ ಎಂದಿದ್ದಕ್ಕೆ ಮತ್ತಷ್ಟು ಕುಪಿತನಾದ ವಿದ್ಯಾರ್ಥಿ ಅಲ್ಲಾ ರೀ ಹಸಿವಿನ ಬೆಲೆ ಗೊತ್ತೇ .ನೀವು ಮನೆಯಲ್ಲಿ ಸಾಂಬಾರಿಲ್ಲ ಎಂದರೆ ಅನ್ನವನ್ನು ಎಸೆಯುತ್ತೀರಾ ಎಂದು ಯಜಮಾನರಿಗೆ ತಿಳಿಸಿದಾಗ ಕೊನೆಗೆ ಸಾಂಬಾರು ಹಾಕಿಸಿಕೊಂಡು ಊಟ ಮಾಡಿ ಹೋದ ಪ್ರಸಂಗ ನಡೆದಿದೆ.
ಅನ್ನವನ್ನು ವ್ಯರ್ಥ ಮಾಡುವವರಿಗೆ ಇದೊಂದು ಉತ್ತಮ ಪಾಠ ಎಂದರೆ ತಪ್ಪಾಗಲಾರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ