ಅಸಲಿ ಪೊಲೀಸರ ಬಲೆಗೆ ಬಿದ್ದ ನಕಲಿ ಸಬ್ ಇನ್ಸ್ಪೆಕ್ಟರ್

ಮೈಸೂರು, ಜ.23- ಇಲ್ಲಿನ ಶಕ್ತಿ ನಗರದ ನಿವಾಸಿಯೊಬ್ಬರ ಮನೆಗೆ ಬಂದು ತಾನು ಪೊಲೀಸ್ ಅಧಿಕಾರಿ ನಿಮ್ಮ ಮಗ ಪ್ರೇಮಿಸಿ ಯುವತಿಗೆ ವಂಚಿಸಿದ್ದಾನೆ. ಆತನನ್ನು ಸೆರೆ ಹಿಡಿಯಲು ಬಂದಿದ್ದೇನೆ ಎಂದು ಧಮ್ಕಿ ಹಾಕಿ ಹಣ ಪಡೆಯಲು ಪ್ರಯತ್ನಿಸಿದ್ದ ನಕಲಿ ಸಬ್ ಇನ್ಸ್‍ಪೆಕ್ಟರ್ ಅಸಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಾವೇರಿ ಜಿಲ್ಲೆಯ ಶಿಂಗಾವಿ ತಾಲ್ಲೂಕಿನ ಸಿದ್ದಪ್ಪ ಚನ್ನಬಸಪ್ಪ ನಾಮಕ್ಕನವರ್ (27) ಬಂಧಿತ ಆರೋಪಿಯಾಗಿದ್ದಾನೆ.

ನಾರಾಯಣಗೌಡ ಎಂಬುವರ ಮನೆಗೆ ಮೊನ್ನೆ ಏಕಾಏಕಿ ಬಂದ ಚನ್ನಬಸಪ್ಪ ತಾನು ಗುಪ್ತಚರ ವಿಭಾಗದ ಎಸ್‍ಐ ನಿಮ್ಮ ಮಗ ರೇಣುಕಾಗೌಡ ಬೆಂಗಳೂರಿನಲ್ಲಿ ಯುವತಿಯೊಬ್ಬಳಿಗೆ ವಂಚಿಸಿದ್ದಾನೆ. ಕೂಡಲೇ ಆತನನ್ನು ನೀವು ನಮ್ಮ ವಶಕ್ಕೆ ನೀಡದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಕೂಗಾಡಿದ್ದಾನೆ.

ಸರ್ ನೀವ್ಯಾರು ಹೀಗೇಕೆ ಸಿಟ್ಟಾಗಿ ಕೂಗುತ್ತಿದ್ದಾರಾ ಎಂದು ಗಾಬರಿಗೊಂಡು ಕೇಳಿಕೊಂಡರೂ ನಾನು ನನ್ನ ಬಟ್ಟೆ ಕಾಣುತ್ತಿಲ್ಲವೇ?ಜಾಸ್ತಿ ಮಾತನಾಡಿದರೆ ನಿಮ್ಮನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಜೈಲಿನೊಳಗೆ ಹಾಕುತ್ತೇನೆ ಎಂದು ಬೆದರಿಸಿದ್ದಾನೆ.

ಬೆಚ್ಚಿದ ಮನೆಯವರು ಇದರ ಬಗ್ಗೆ ಮಗನ ಹತ್ತಿರ ಮಾತನಾಡುತ್ತೇನೆ. ಸ್ವಲ್ಪ ತಾಳ್ಮೆಯಿಂದ ಇರಿ ಎಂದಾಗ 50,000 ಕೊಟ್ಟರೆ ಕೇಸ್ ಕ್ಲೋಸ್ ಮಾಡಿಸುತ್ತೇನೆ ಎಂದು ತನ್ನ ಆಟ ಶುರು ಮಾಡಿದ್ದಾನೆ. ಅವರು ಸದ್ಯ ಇಲ್ಲಿಲ್ಲ ಎಂದು ಹೇಳಿದಾಗ ಕನಿಷ್ಠ 5,000 ಈಗ ಕೊಟ್ಟು ಉಳಿದ ಹಣವನ್ನು ಬ್ಯಾಂಕ್ ಅಕೌಂಟ್‍ಗೆ ಹಾಕಿ ಎಂದು ಹೇಳಿ ಹೋಗಿದ್ದಾನೆ.

ಯಾವುದಕ್ಕೂ ಪೊಲೀಸರನ್ನು ವಿಚಾರಿಸೋಣ ಎಂದು ಉದಯಗಿರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಮಫ್ತಿಯಲ್ಲಿ ಕಾರ್ಯ ಪ್ರವೃತ್ತರಾದ ಪೊಲೀಸರು ತಕ್ಷಣ ಮನೆಯ ಬಳಿ ಬಂದು ಅಲ್ಲೇ ಇದ್ದ ಆತನನ್ನು ವಿಚಾರಿಸಿದಾಗ ಅವರ ಬಳಿಯೂ ನಾನು ಎಸ್‍ಐ ಎಂದು ನಾಟಕವಾಡಿದ್ದಾನೆ.

ಏನೋ ಅನುಮಾನ ಬರುತ್ತಿದೆಯಲ್ಲಾ ಎಂದು ತಿಳಿದ ಮಫ್ತಿಯಲ್ಲಿದ್ದ ಅಸಲಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ವಿಚಾರಿಸಿದಾಗ ಆತ ನಕಲಿ ಪೊಲೀಸ್ ಎಂದು ಗೊತ್ತಾಗಿದೆ.

ಕೃತ್ಯಕ್ಕೆ ಬಳಸಿಕೊಂಡಿದ್ದ ಕಾರು , 5,000 ಹಣವನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ