ಬೆಂಗಳೂರು, ಜ.22-ಚೆನ್ನೈನ ಪ್ರತಿಷ್ಠಿತ ರೇಲಾ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶ್ರೀಗಳು ಚಿಕಿತ್ಸೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.ಆದರೂ ಅವರು ಲಿಂಗಪೂಜಾ ಕೈಂಕರ್ಯಗಳನ್ನು ಬಿಟ್ಟಿರಲಿಲ್ಲ. ಆಸ್ಪತ್ರೆಯಲ್ಲಿಯೇ ಪೂಜೆಯನ್ನು ನೆರವೇರಿಸುತ್ತಿದ್ದರು.ಪ್ರಸಿದ್ಧ ವೈದ್ಯರಾದ ಮಹಮ್ಮದ್ ರೇಲಾ ಅವರು ಶ್ರೀಗಳೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಶ್ರೀಗಳೇ ಅನಾರೋಗ್ಯದ ನಡುವೆಯೂ ಮೂರು ಹೊತ್ತು ಪೂಜೆ ಮಾಡುತ್ತೀರ. ನೀವು ದೇವರನ್ನು ನೋಡಿದ್ದೀರ ಎಂದು ಪ್ರಶ್ನಿಸಿದ್ದರು.
ಇದಕ್ಕೆ ನಕ್ಕು ಉತ್ತರಿಸಿದ ಶ್ರೀಗಳು, ಹೌದು. ನಾನು ದೇವರನ್ನು ನೋಡಿದ್ದೇನೆ ಎಂದರು.
ಆಗ ಡಾ.ಮಹಮ್ಮದ್ ರೇಲಾ ಅವರು ದೇವರು ಎಲ್ಲಿದ್ದಾನೆ ತೋರಿಸಿ ಎಂದಾಗ, ಮತ್ತೆ ಸ್ವಲ್ಪ ಜೋರಾಗಿ ನಕ್ಕ ಶ್ರೀಗಳು ತೋರಿಸುತ್ತೇನೆ. ನಮ್ಮ ಮಠಕ್ಕೆ ಬನ್ನಿ. ಒಬ್ಬರಲ್ಲ, ಹತ್ತು ಸಾವಿರ ದೇವರುಗಳಿದ್ದಾರೆ. ಪ್ರತಿದಿನ ಅವರನ್ನು ನಾನು ನೋಡುತ್ತಿರುತ್ತೇನೆ. ನಿಮಗೂ ತೋರಿಸುತ್ತೇನೆ ಬನ್ನಿ ಎಂದು ಕರೆದರು.
ಯಾರವರು ಎಂದು ಡಾ.ರೇಲಾ ಅವರು ಕೇಳಿದಾಗ ಮತ್ತಿನ್ಯಾರು ನಮ್ಮ ಮಠದ ಮಕ್ಕಳು! ಅವರೇ ನಮ್ಮ ಪಾಲಿನ ದೇವರು.ಅವರ ಒಳಿತಿಗೋಸ್ಕರವೇ ನನ್ನ ಪೂಜೆ, ನನ್ನ ಕೆಲಸ ಎಂದು ರೇಲಾ ಅವರಿಗೆ ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ರೇಲಾ ಅವರು ಈ ಮಾತು ಕೇಳಿ ಕ್ಷಣ ಕಾಲ ತಬ್ಬಿಬ್ಬಾದರು. ಈ ಇಳಿವಯಸ್ಸಿನಲ್ಲೂ ಪೂಜಾ ಕೈಂಕರ್ಯಗಳೊಂದಿಗೆ ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದ ಶ್ರೀಗಳಿಗೆ ನಮಿಸಿ ಚಿಕಿತ್ಸೆಯನ್ನು ಮುಂದುವರೆಸುವಂತೆ ಸಹ ವೈದ್ಯರಿಗೆ ತಿಳಿಸಿ ಹೊರನಡೆದರು.
ಈ ಒಂದು ಸಂಭಾಷಣೆಯನ್ನು ಶ್ರೀಗಳ ಕಾರಿನ ಚಾಲಕರಾದ ಮಹದೇವಸ್ವಾಮಿಯವರು ತಿಳಿಸಿದ್ದಾರೆ. ನಾನು ಅವರನ್ನು ಕೂರಿಸಿಕೊಂಡು ಕಾರು ಚಾಲನೆ ಮಾಡುತ್ತಿದ್ದುದು ನನ್ನ ಪಾಲಿನ ಸೌಭಾಗ್ಯ. ಸಾಕಷ್ಟು ಇಂತಹ ಉದಾಹರಣೆಗಳನ್ನು ಕೊಡಬಲ್ಲೆ.ಅವರು ಕಾಯಕದಲ್ಲಿ, ದಾಸೋಹದಲ್ಲಿ, ಮಕ್ಕಳಲ್ಲಿ ದೇವರನ್ನು ಕಂಡಿದ್ದಾರೆ. ಅವಿರತವಾಗಿ ಅವರು ವಹಿಸುತ್ತಿದ್ದ ಶ್ರಮದಲ್ಲಿ ದೇವರನ್ನು ಕಂಡಿದ್ದಾರೆ.ಎಂದೂ ಯಾರೊಂದಿಗೂ ಅವರು ಕೋಪಿಸಿಕೊಳ್ಳುತ್ತಿರಲಿಲ್ಲ ಎಂದು ನೊಂದು ಶ್ರೀಗಳನ್ನು ಚಾಲಕರಾದ ಮಹದೇವಸ್ವಾಮಿ ಸ್ಮರಿಸಿಕೊಂಡರು.
ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಅವರ ಒಡನಾಟದಲ್ಲಿದ್ದೆ. ಇಂದು ಭೌತಿಕವಾಗಿ ಅವರು ನಮ್ಮೊಂದಿಗಿಲ್ಲ. ಆದರೆ ಅವರ ಆಶೀರ್ವಾದ ನನ್ನ ಹಾಗೂ ನನ್ನ ಕುಟುಂಬದವರೆಲ್ಲರ ಮೇಲಿದೆ ಎಂದು ಹೇಳಿದರು.