ತುಮಕೂರು, ಜ.22-ತಮ್ಮ ಜೀವಮಾನದುದ್ದಕ್ಕೂ ಅನ್ನದಾಸೋಹಕ್ಕೆ ಹೆಚ್ಚು ಮಹತ್ವ ನೀಡಿದ ಸಿದ್ದಗಂಗಾ ಶ್ರೀಗಳು ತಾವು ಇಹಲೋಕ ತ್ಯಜಿಸಿದ ನಂತರವೂ ಅನ್ನದಾಸೋಹ ನಿಲ್ಲಬಾರದೆಂಬ ಸೂಚನೆ ನೀಡಿದ್ದರು. ಶ್ರೀಗಳ ಆಶಯದಂತೆ ಇಂದು ಅಂತಿಮ ದರ್ಶನ ಪಡೆದ ಭಕ್ತಾದಿಗಳಿಗೆ ಶ್ರೀಮಠ ಪ್ರಸಾದದ ವ್ಯವಸ್ಥೆ ಮಾಡಿತ್ತು.
ಶ್ರೀಗಳ ಅಂತಿಮ ದರ್ಶನಕ್ಕೆ ನಿನ್ನೆಯಿಂದ ನಿರಂತರವಾಗಿ ಲಕ್ಷಾಂತರ ಮಂದಿ ಆಗಮಿಸಿದ್ದರಿಂದ ಅಷ್ಟು ಮಂದಿಗೆ ಕುಡಿಯುವ ನೀರು, ಆಹಾರ ಒದಗಿಸುವುದು ಕಷ್ಟದ ಕೆಲಸವಾಗಿತ್ತು. ಸಂಚಾರದ ದಟ್ಟಣೆಯಿಂದಾಗಿ ಶ್ರೀ ಮಠದ ಸುತ್ತಮುತ್ತಲಿನ ಎಲ್ಲಾ ಅಂಗಡಿಮುಂಗಟ್ಟು ಮತ್ತು ಹೊಟೇಲ್ಗಳು ಮುಚ್ಚಲ್ಪಟ್ಟಿದ್ದವು.
ಹೀಗಾಗಿ ಅಂತಿಮ ದರ್ಶನಕ್ಕೆ ಬಂದ ಭಕ್ತರಿಗೆ ಹಸಿವು, ನೀರಡಿಕೆ ಸಮಸ್ಯೆ ಕಾಡಬಾರದೆಂದು ಶ್ರೀಮಠ ಪ್ರಸಾದದ ವ್ಯವಸ್ತೆ ಮಾಡಿತ್ತು.ಬೆಳಗ್ಗೆ ಖಾರಬಾತ್, ಕೇಸರಿಬಾತ್, ಕಾಫಿ-ಟೀ, ಮಧ್ಯಾಹ್ನ ಅನ್ನ-ಸಾಂಬಾರ್ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಶ್ರೀಗಳು ತಮ್ಮ ಲಿಂಗೈಕ್ಯದ ಸುದ್ದಿಯನ್ನು ಮಠದ ಮಕ್ಕಳು ಸ್ವೀಕರಿಸಿದ ನಂತರವೇ ಪ್ರಕಟಿಸಬೇಕು ಎಂಬ ಸೂಚನೆ ನೀಡಿದ್ದರು.ಅದೇ ರೀತಿ ತಮ್ಮ ನಂತರವೂ ಪ್ರಸಾದ ವಿತರಣೆ ನಿಲ್ಲಬಾರದು ಎಂಬ ಆಶಯ ವ್ಯಕ್ತಪಡಿಸಿದ್ದರು.ಶ್ರೀಮಠ ಅದಕ್ಕನುಗುಣವಾಗಿಯೇ ನಡೆದುಕೊಂಡಿದೆ.