ಬೆಂಗಳೂರು: ನಡೆದಾಡುವದೇವರು’ ಎಂದೇ ಕರೆಸಿಕೊಳ್ಳುವ ತುಮಕೂರು ಸಿದ್ಧಗಂಗಾ ಮಠದ 111 ವರ್ಷದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಶ್ರೀಗಳು ನಿನ್ನೆ ಬೆಳಗ್ಗೆ 11.45ಕ್ಕೆ ಲಿಂಗೈಕ್ಯರಾಗಿದ್ದಾರೆ. ಇಂದು ಸಂಜೆ 3.30ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4.30ರ ನಂತರ ಅಂತ್ಯ ಸಂಸ್ಕಾರ ನೆರವೇರಲಿದೆ. ಇಂದು ಸರ್ಕಾರಿ ರಜೆ ಘೋಷಿಸಲಾಗಿದ್ದು, ಚಿತ್ರೋದ್ಯಮ ಕೂಡ ಬಂದ್ ಘೋಷಿಸಿದೆ.
ಸಿದ್ದಗಂಗಾ ಶ್ರೀಗಳ ಅಂತಿಮ ಕ್ರಿಯಾಪೂಜೆಗೆ ಸಕಲ ಸಿದ್ದತೆ ನಡೆಯುತ್ತಿದ್ದು, ನಿನ್ನೆ ರಾತ್ರಿಯಿಡೀ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಇನ್ನೂ 7 ಲಕ್ಷ ಜನರು ಇಂದು ಆಗಮಿಸುವ ನಿರೀಕ್ಷೆಯಿದೆ. ಅಂತ್ಯಸಂಸ್ಕಾರಕ್ಕೆ ಗದ್ದುಗೆ ಒಳಗೆ ಕೊನೆಹಂತದ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
5 ಮೆಟ್ಟಿಲುಗಳನ್ನೊಳಗೊಂಡ ಸಮಾಧಿ ನಿರ್ಮಾಣ ಮಾಡಲಾಗಿದ್ದು, ಓಂ ನಮಃ ಶಿವಾಯ ಪರಿಕಲ್ಪನೆಯಲ್ಲಿ ಶ್ರೀಗಳ ಸಮಾಧಿ ನಿರ್ಮಾಣ ಮಾಡಲಾಗಿದೆ. ಸಮಾಧಿ ಕೇಳಗೆ ವಿಶೇಷ ಪೀಠ ಹಾಗೂ ಗುಹೆ ನಿರ್ಮಾಣ ಮಾಡಲಾಗಿದೆ. ಸಂಜೆ 3.30ರ ಬಳಿಕ ಪೀಠದ ಮೇಲೆ ಶ್ರೀಗಳನ್ನ ಕೂರಿಸಿ ಕೊನೆಯ ಪೂಜೆ ನೆರವೇರಿಸಲಾಗುವುದು.