ತುಮಕೂರು: ದಾಸೋಹಿ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನಿನ್ನೆ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. 111 ವರ್ಷ ಕಾಯಕಯೋಗಿಯಂತೆ ಬದುಕು ನಡೆಸಿದ ಶ್ರೀಗಳ ನೆರಳಲ್ಲಿ ಬದುಕು ಕಟ್ಟಿಕೊಂಡವರು ಕೋಟ್ಯಂತರ ಜನರು. ಶ್ರೀಗಳ ಅಂತ್ಯ ಸಂಸ್ಕಾರ ಇಂದು ಸಂಜೆ 4 ಗಂಟೆಯ ನಂತರ ನಡೆಯಲಿದ್ದು, ಈಗಾಗಲೇ ಗದ್ದುಗೆಯನ್ನು ಮಠದ ಸಿಬ್ಬಂದಿ ಅಲಂಕರಿಸಿದ್ದಾರೆ.
ಸಿದ್ದಗಂಗಾ ಶ್ರೀಗಳ ಅಂತಿಮ ಕ್ರಿಯಾಪೂಜೆಗೆ ಸಕಲ ಸಿದ್ದತೆಗಳು ನಡೆದಿದ್ದು, ಗದ್ದುಗೆ ಒಳಗೆ ಕೊನೆಹಂತದ ಸಿದ್ದತೆಗಳು ನಡೆಯುತ್ತಿವೆ. ಗದ್ದುಗೆಯ ಒಳಭಾಗದಲ್ಲೂ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಗದ್ದುಗೆಯ ಗರ್ಭಗುಡಿಯನ್ನು ಮಠದ ಸಿಬ್ಬಂದಿ ಅಲಂಕರಿಸಿದ್ದಾರೆ. ಗದ್ದುಗೆಯಲ್ಲಿ ಶ್ರೀಗಳ ಕ್ರಿಯಾಪೂಜೆಯ ಸಿದ್ಧತೆಗಳು ನಡೆಯುತ್ತಿವೆ. ಈ ಗದ್ದುಗೆಯ ನಿರ್ಮಾಣಕ್ಕೆ 1982ರಲ್ಲಿ ಅಡಿಗಲ್ಲು ಹಾಕಲಾಯಿತು. ಪೂರ್ಣ ಕೆಲಸ ಮುಗಿಸಬಾರದು ಅನ್ನೋ ಪ್ರತೀತಿ ಇರುವುದರಿಂದ ಒಂದಿಷ್ಟು ಕೆಲಸಗಳನ್ನು ಬಾಕಿ ಉಳಿಸಿಕೊಂಡಿದ್ದೇವೆ. ಇಂದಿನವರೆಗು ಒಂದೊಂದೇ ಕೆಲಸಗಳನ್ನು ಮುಗಿಸಲಾಗಿದೆ. ಬಹುತೇಕ ಇಂದಿನ ಎಲ್ಲ ಸಿದ್ದತಾ ಕಾರ್ಯ ಮುಗಿದಿದೆ. ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಕೊನೆ ಪೂಜೆ ನಡೆಯಲಿದೆ. ಶ್ರೀಗಳ ಆಸೆಯಂತೆ ಎಲ್ಲವೂ ಈಡೇರಿದರೆ ಸಾಕು ಎಂದು ಗದ್ದುಗೆ ಉಸ್ತುವಾರಿ ವಹಿಸಿರುವ ವೇದಮೂರ್ತಿ ನ್ಯೂಸ್18ಗೆ ಹೇಳಿಕೆ ನೀಡಿದ್ದಾರೆ.
ವಿಶೇಷ ಗುಹೆ ನಿರ್ಮಾಣ:
ಓಂ ನಮಃ ಶಿವಾಯ ಪರಿಕಲ್ಪನೆಯಲ್ಲಿ 5 ಮೆಟ್ಟಿಲುಗಳನ್ನೊಳಗೊಂಡ ಸಮಾಧಿ ನಿರ್ಮಾಣ ಮಾಡಲಾಗಿದೆ. ಸಮಾಧಿಯ ಕೆಳಗೆ ವಿಶೇಷ ಪೀಠ ಹಾಗೂ ಗುಹೆ ನಿರ್ಮಾಣ ಮಾಡಲಾಗಿದೆ. ಪೀಠದ ಮೇಲೆ ಶ್ರೀಗಳನ್ನು ಕೂರಿಸಿ ಕೊನೆ ಪೂಜೆ ನೆರವೇರಿಸಲಾಗುವುದು. ಕಿರಿಯ ಶ್ರೀಗಳಾದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ. 15 ಪುರೋಹಿತರಿಂದ ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಲಿದೆ. ಮಧ್ಯಾಹ್ನ 3.30ರ ನಂತರ ನಡೆಯಲಿರುವ ಕ್ರಿಯಾ ಸಮಾಧಿ ಪೂಜೆ ನೆರವೇರಲಿದೆ.
100 ಕೆಜಿಗೂ ಹೆಚ್ಚು ವಿಭೂತಿ ಬಳಕೆ:
ಸಿದ್ಧಗಂಗಾ ಶ್ರೀಗಳ ಕ್ರಿಯಾಪೂಜೆಗೆ ಹೆಚ್ಚು ವಿಭೂತಿಯನ್ನು ಬಳಸಲಾಗುತ್ತಿದೆ. ಮಠದ ಗದ್ದುಗೆಯಲ್ಲಿ ವಿಭೂತಿ ಸಂಗ್ರಹ ಮಾಡಲಾಗುವುದು. ಸುಮಾರು 100 ಕೆಜಿಗೂ ಹೆಚ್ಚು ವಿಭೂತಿ ಬಳಕೆ ಮಾಡಲಾಗುವುದು. ಕ್ರಿಯಾಪೂಜೆಗೆ 50 ಮೂಟೆಗೂ ಹೆಚ್ಚು ಉಪ್ಪು, 25 ಮೂಟೆಗೂ ಹೆಚ್ಚು ಅಕ್ಕಿ ಬಳಕೆ ಮಾಡಲಾಗುವುದು. ಇವೆಲ್ಲವನ್ನೂ ಗದ್ದುಗೆ ಒಳಭಾಗದಲ್ಲಿ ಸಂಗ್ರಹಿಸಲಾಗುವುದು. ಬಳಿಕ, ಕಿರಿಯ ಶ್ರೀಗಳಿಂದ ಇಷ್ಟಲಿಂಗ ಪೂಜೆ ನೆರವೇರಲಿದೆ.
ಇಂದು ಭಕ್ತರು, ವಿಐಪಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ 3 ಗಂಟೆವರೆಗೂ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ ಮೆರವಣಿಗೆ ಮಾಡಿ ಸಂಜೆ 5 ಗಂಟೆಯ ಬಳಿಕ ಕ್ರಿಯಾಸಮಾಧಿ ನೆರವೇರಿಲಸಾಗುವುದು. ಸುತ್ತೂರು ಶ್ರೀಗಳು, ಕನಕಪುರ ಮುಮ್ಮಡಿ ಶ್ರೀಗಳು ಮುಂತಾದ 15-20 ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ವಿಧಿ ವಿಧಾನ ನೆರವೇರಲಿದೆ. ಶ್ರೀಗಳ ಅಪೇಕ್ಷೆಯಂತೆಯೇ ಕ್ರಿಯಾ ವಿಧಾನ ನೆರವೇರಲಿದೆ. ಈಗಾಗಲೇ ಶ್ರೀಗಳು ಕ್ರಿಯಾವಿಧಾನ ಬರೆದಿದ್ದಾರೆ. ಅವರು ಬರೆದಿರುವ ಹಾಗೇ ಮಾಡಲಾಗುತ್ತದೆ. ಅವರ ಗುರುಗಳ ರೀತಿಯೇ ಕ್ರಿಯಾವಿಧಾನ ನೆರವೇರಿಸಲಾಗುವುದು ಎಂದು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.