ತುಮಕೂರು: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹಿ ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(111ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ 3ಗಂಟೆವರೆಗೆ ಸ್ವಾಮೀಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ತದನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.
ನಿನ್ನೆ ರಾತ್ರಿಯಿಡೀ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಇನ್ನೂ ಸಹ ಸಾಗರೋಪಾದಿಯಲ್ಲಿ ಜನಸಾಗರ ಹರಿದು ಬರುತ್ತಿದೆ.
ಇಂದು ಬೆಳಿಗ್ಗೆ ಮಠದ ಆವರಣದಲ್ಲಿನ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ನಿನ್ನೆಯಿಂದಲೂ ಭಕ್ತ ಸಮೂಹ ಶ್ರೀಗಳಾದ ಶಿವಕುಮಾರ ಸ್ವಾಮೀಜಿಯವರ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 3 ಗಂಟೆವರೆಗೂ ದರ್ಶನಕ್ಕೆ ಅವಕಾಶವಿದೆ. ಬಳಿಕ ಸಂಜೆ 4 ಗಂಟೆಯಿಂದ ಕ್ರಿಯಾಸಮಾಧಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 5 ಗಂಟೆಗೆ ಅಂತಿಮ ಕ್ರಿಯಾಸಮಾಧಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶ್ರೀಗಳು ಬರೆದಿಟ್ಟಿರುವಂತೆ ಕ್ರಿಯಾಸಮಾಧಿ:
ತಮ್ಮ ಅಂತಿಮ ಕ್ರಿಯಾವಿಧಾನ ಹೇಗೆ ನಡೆಯಬೇಕೆಂದು ಶ್ರೀಗಳು ಬರೆದಿಟ್ಟಿದ್ದಾರೆ. ಅವರ ಅಪೇಕ್ಷೆಯಂತೆಯೇ ಕ್ರಿಯಾವಿಧಾನ ನಡೆಯಲಿದೆ. ಶ್ರೀಗಳು ತಮ್ಮ ಹಿರಿಯ ಗುರುಗಳಾದ ಉದ್ಧಾನ ಶಿವಯೋಗಿಗಳಿಗೆ ಕ್ರಿಯಾಸಮಾಧಿ ನೆರವೆರಿಸಿದಂತೆಯೇ ಶಿವಕುಮಾರ ಶ್ರೀಗಳ ಕ್ರಿಯಾಸಮಾಧಿ ನೆರವೇರಿಸುತ್ತೇವೆ ಎಂದು ತಿಳಿಸಿದರು.