ಬೆಂಗಳೂರು, ಜ.22- ಲಿಂಗೈಕ್ಯರಾದ ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ನಾಡಿನಾದ್ಯಂತ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೀದರ್ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ಜನ ಸಿದ್ಧಗಂಗಾ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.
ತಂಡೋಪತಂಡವಾಗಿ ತುಮಕೂರಿನ ಶ್ರೀಮಠಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರೆ, ತುಮಕೂರು ಮಠಕ್ಕೆ ಬರಲಾಗದವರು ಇದ್ದಲ್ಲಿಯೇ ಭಾವಚಿತ್ರವನ್ನಿಟ್ಟು ಪುಷ್ಪನಮನ ಸಲ್ಲಿಸಿ ಶ್ರೀಗಳ ಗುಣಗಾನ ಮಾಡಿದರು.
ಸಂಘ-ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ವಿವಿಧ ಮಠಗಳ ಭಕ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ರಾಜ್ಯಾದ್ಯಂತ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಪ್ರಮುಖ ನಗರಗಳ ವೃತ್ತಗಳಲ್ಲಿ ಶ್ರೀಗಳ ಭಾವಚಿತ್ರವನ್ನಿಟ್ಟು ಭಕ್ತರು ನಮಿಸುತ್ತಿದ್ದುದು ಕಂಡುಬಂತು.
ಸುಮಾರು ಆರೇಳು ದಶಕಗಳ ಹಿಂದೆಯೇ ಶಾಲೆ-ಕಾಲೇಜುಗಳನ್ನು ಶ್ರೀಮಠದಲ್ಲಿ ಗುರುಗಳು ಪ್ರಾರಂಭಿಸಿದ್ದರು.ಇಲ್ಲಿ ತಾವು ಓದಿರುವುದಲ್ಲದೆ, ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಓದಿಸಿದ್ದನ್ನು ಸ್ಮರಿಸಿದ ಜನ ಶ್ರೀಗಳಿಗೆ ಭಕ್ತಿ-ಭಾವದಿಂದ ನಮಿಸುತ್ತಿದ್ದರು.
ಅವರು ಲಿಂಗೈಕ್ಯರಾದ್ದನ್ನು ಕೇಳಿ ಅಪಾರ ನೋವು ಅನುಭವಿಸುತ್ತಿದ್ದರು.ನಮ್ಮ ಪಾಲಿನ ಆರಾಧ್ಯ ದೈವ, ನಾವು ಅವರನ್ನು ಪ್ರತಿವರ್ಷ ನೋಡುತ್ತಿದ್ದೆವು. ಮಠಕ್ಕೆ ಭೇಟಿ ನೀಡುತ್ತಿದ್ದೆವು ಎಂದು ಹಲವರು ಹೇಳುತ್ತಿದ್ದರೆ, ಅವರನ್ನು ನೋಡದವರೇ ಇಲ್ಲ, ಅವರ ಕೆಲಸಗಳೇ ಸಮಾಜಕ್ಕೆ ಶ್ರೀರಕ್ಷೆಯಾಗಿವೆ. ಆ ಮೂಲಕ ಅವರನ್ನು ಕಂಡಿದ್ದೇವೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದು ಕಂಡುಬಂತು.
ದೂರದ ರಾಯಚೂರು, ಬಳ್ಳಾರಿ, ಬೀದರ್, ಬಿಜಾಪುರ, ಪ್ರಮುಖ ನಗರ-ಪಟ್ಟಣಗಳಲ್ಲಿ ಶ್ರೀಗಳ ಭಾವಚಿತ್ರವನ್ನಿಟ್ಟು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಇತ್ತ ರಾಜಧಾನಿ ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘಟನೆಗಳವರು ಶ್ರೀಗಳಿಗೆ ನಮನ ಸಲ್ಲಿಸುತ್ತಿದ್ದರು.
ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿ ಸ್ವಯಂಪ್ರೇರಿತ ಬಂದ್ ಮಾಡಲಾಯಿತು.ಚಾಮರಾಜನಗರದಲ್ಲೂ ಕೂಡ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತಗಣ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.