ತುಮಕೂರು, ಜ.22- ಸಂಪೂರ್ಣ ಚಿತ್ರೋದ್ಯಮವನ್ನು ಬಂದ್ ಮಾಡಿದ ಕನ್ನಡ ಚಿತ್ರರಂಗದ ಗಣ್ಯರು, ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಎಲ್ಲರೂ ಇಂದು ತುಮಕೂರಿಗೆ ತೆರಳಿ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆದರು.
ಕಾಯಕಯೋಗಿ, ಶತಾಯುಷಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಚಿತ್ರೀಕರಣ, ಚಿತ್ರ ಪ್ರದರ್ಶನ ಎಲ್ಲವನ್ನೂ ಸ್ಥಗಿತಗೊಳಿಸಿ ಇಡೀ ಚಿತ್ರರಂಗ ತುಮಕೂರಿನತ್ತ ದಾವಿಸಿ ಶ್ರೀಗಳ ಕ್ರಿಯಾಸಮಾಧಿಯಲ್ಲಿ ಪಾಲ್ಗೊಂಡಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ನಟರಾದ ಪುನಿತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಯಶ್, ಸುದೀಪ್, ಜಗ್ಗೇಶ್, ಲೀಲಾವತಿ, ವಿನೋದ್‍ರಾಜ್‍ಕುಮಾರ್ ಸೇರಿದಂತೆ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ತುಮಕೂರಿಗೆ ತೆರಳಿ ಶ್ರೀಗಳ ಅಂತಿಮ ದರ್ಶನ ಪಡೆದು ಕ್ರಿಯಾಸಮಾಧಿಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್ ಅವರು, ಕಾಯಕ ತತ್ತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಸಿದ್ಧಗಂಗಾ ಮಠವನ್ನು ಬಸವಣ್ಣನವರ ಅನುಭವ ಮಂಟಪವನ್ನಾಗಿ ಮಾಡಿಕೊಂಡಿದ್ದ ಸಿದ್ಧಗಂಗಾ ಶ್ರೀಗಳು ಇಹಲೋಕ ತ್ಯಜಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಅವರು ಲಿಂಗೈಕ್ಯರಾಗುವವರೆಗೂ ದಾಸೋಹಕ್ಕೆ ಅಡಚಣೆಯಾಗದಂತೆ ಮಾಡಿದ್ದರು.ಕೊನೆಕ್ಷಣದವರೆಗೂ ಕೂಡ ದಾಸೋಹಕ್ಕೆ ತೊಂದರೆಯಾಗದಂತೆ ಕಾಪಾಡಿಕೊಂಡು ಬಂದಂತಹ ದೇವರಾಗಿದ್ದರು.ಆ ದೇವರು ಭೌತಿಕವಾಗಿ ನಮ್ಮೆದುರು ಇಲ್ಲದಂತಾಗಿದ್ದಾರೆ.ಹಲವು ವರ್ಷಗಳ ಹಿಂದೆ ಅವರು ನೀಡಿದ್ದ ಪಾದುಕೆಗಳು ಈಗಲೂ ನಮ್ಮ ಮನೆಯಲ್ಲಿ ಅವುಗಳನ್ನು ಪೂಜಿಸುತ್ತಿದ್ದೇನೆ ಎಂದು ಸ್ಮರಿಸಿದರು.
ಚಿತ್ರೀಕರಣದ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ನಟ ಶಿವರಾಜ್‍ಕುಮಾರ್ ಟ್ವಿಟ್ ಮಾಡಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿರುವ ಸಿದ್ಧಗಂಗಾ ಶ್ರೀಗಳು ನಮ್ಮೆದುರಿಗೆ ಇಲ್ಲದಿದ್ದರೂ ಅವರು ನೀಡುತ್ತಿದ್ದ ಜ್ಞಾನದಲ್ಲಿ ಜೀವಂತವಾಗಿರುತ್ತಾರೆ. ಅವರ ಆಶೀರ್ವಾದ ನಿರಂತರವಾಗಿ ನಮ್ಮ ಮೇಲಿರುತ್ತದೆ ಎಂದು ತಿಳಿಸಿದ್ದಾರೆ.
ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ದೇವರಾದ ಸಿದ್ಧಗಂಗಾ ಶ್ರೀಗಳು ನಮ್ಮೆದುರಿಗೆ ಇಲ್ಲದಿರಬಹುದು.ಎಲ್ಲರ ಮನಗಳಲ್ಲಿ, ಮನೆಗಳಲ್ಲಿ ಮನೆಮಾಡಿದ್ದಾರೆ.ನಡೆದಾಡುವ ದೇವರು ದೇವರಲ್ಲಿಗೆ ಹೋಗಿದ್ದಾರೆ ಎಂದು ಹೇಳಿದರು.
ಸಿನಿಮಾ ರಂಗದ ಮೇಲೂ ಶ್ರೀಗಳು ಬೆಳಕು ಚೆಲ್ಲಿದ್ದಾರೆ. ಹಾಗಾಗಿ ಅವರ ಅಂತಿಮ ದರ್ಶನ ಪಡೆಯಲು ಬಹಳಷ್ಟು ಕಲಾವಿದರು ಇಂದು ಆಗಮಿಸಿದ್ದು ವಿಶೇಷವಾಗಿತ್ತು. ಇದಲ್ಲದೆ, ಸಿನಿಮಾ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡವರು ಈ ಮಠದ ಹಳೆಯ ವಿದ್ಯಾರ್ಥಿಗಳಾಗಿದ್ದನ್ನು ಇಂದು ಸ್ಮರಿಸಿಕೊಂಡರು.