ದುಬೈ, ಜ.22-ಭಾರತದ ಪ್ರತಿಭಾವಂತ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಉದಯೋನ್ಮುಖ ಆಟಗಾರ-2018 ಗೌರವಕ್ಕೆ ಪಾತ್ರರಾಗಿದ್ದಾರೆ.
ವಿಶ್ವ ಕ್ರಿಕೆಟ್ ಸಂಸ್ಥೆ(ಐಸಿಸಿ) ಪ್ರಕಟಿಸಿದ ವಾರ್ಷಿಕ ಪ್ರಶಸ್ತಿಗಳಲ್ಲಿ 21 ವರ್ಷದ ರಿಷಭ್ ಪಂತ್ ವರ್ಷದ ಐಸಿಸಿ ಎಮರ್ಜಿಂಗ್ ಪ್ಲೇಯರ್ ಕೀರ್ತಿಗೆ ಭಾಜನರಾದರು.
2018ರಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ರಿಷಭ್ ಸಾಧನೆ ಮತ್ತು ಸಾಮಥ್ರ್ಯಗಳನ್ನು ಪರಿಗಣಿಸಿ ಐಸಿಸಿ ಓಟಿಂಗ್ ಅಕಾಡೆಮಿ ಯುವ ಕ್ರಿಕೆಟ್ ಪಟು ಹೆಸರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇಂಗ್ಲೆಂಡ್ ವಿರುದ್ದ ಟೆಸ್ಟ್ನಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ವಿಕೆಟ್-ಕೀಪರ್ ಎಂಬ ಹೆಗ್ಗಳಿಕೆ ಪಡೆದಿರುವ ರಿಷಭ್, ಕಳೆದ ಡಿಸೆಂಬರ್ನಲ್ಲಿ ಆಡಿಲೆಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 11 ಕ್ಯಾಚ್ಗಳ ಮೂಲಕ ಟೆಸ್ಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಹಿಡಿದ ದಾಖಲೆಯನ್ನು ಸಹ ಸರಿಗಟ್ಟಿದ ಕೀರ್ತಿ ಇವರದ್ದಾಗಿದೆ.
ಅಲ್ಲದೇ ಆಸ್ಟ್ರೇಲಿಯಾ ವಿರುದ್ಧವೂ ಟೆಸ್ಟ್ನಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ರಿಷಭ್ ಪಂತ್ ಪಾತ್ರರಾಗಿದ್ದಾರೆ.