ಬೆಂಗಳೂರು, ಜ.22- ನಡೆದಾಡುವ ದೇವರ ಅಂತಿಮ ದರ್ಶನ ಪಡೆಯಲು ಕಲ್ಪತರು ನಾಡಿಗೆ ಜನಸಾಗರವೇ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್.ರಾಜು ಅವರೇ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಿದ್ಧಗಂಗಾ ಮಠದಲ್ಲೇ ಮೊಕ್ಕಾಂ ಹೂಡಿರುವ ನೀಲಮಣಿ ರಾಜು ಅವರು ಭದ್ರತಾ ಪರಿಶೀಲನೆ ನಡೆಸಿದರು.ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರಿಕೆ ವಹಿಸುವಂತೆ ಅಧೀನ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹರಿದು ಬರುತ್ತಿರುವ ಜನಸಾಗರ ನಿಯಂತ್ರಿಸುವಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ನೀಲಮಣಿ ರಾಜು ಅವರು ವಿವರಣೆ ನೀಡಿದರು.
ರಾಜ್ಯ-ಹೊರರಾಜ್ಯಗಳಿಂದ ಅಂತಿಮ ದರ್ಶನಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂಥ್, ಕೇಂದ್ರ ವಲಯ ಐಜಿಪಿ ದಯಾನಂದ್ ಹಾಗೂ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಮಠದಲ್ಲೇ ಬೀಡು ಬಿಟ್ಟಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು, ಇನ್ಸ್ಪೆಕ್ಟರ್ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಸ್ಥಳದಲ್ಲಿ ಕೆಎಸ್ಆರ್ಪಿ, ಸಿಎಆರ್, ಡಿಎಆರ್ ಮತ್ತಿತರ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.