ಭಕ್ತರಿಗೆ ಕೆಲವು ಹೋಟೆಲ್ಗಳಲ್ಲಿ ಉಚಿತ ತಿಂಡಿ-ಊಟದ ವ್ಯವಸ್ಥೆ

ತುಮಕೂರು, ಜ.22- ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತುಮಕೂರಿನ ಕೆಲವು ಹೋಟೆಲ್‍ಗಳಲ್ಲಿ ಉಚಿತವಾಗಿ ತಿಂಡಿ- ಊಟದ ವ್ಯವಸ್ಥೆ ಮಾಡಲಾಗಿದೆ.

ಸಿದ್ಧಗಂಗಾಮಠದಲ್ಲಿ ದಾಸೋಹಕ್ಕಾಗಿ ಹಚ್ಚಿದ ಒಲೆ ಇನ್ನೂ ಆರಿಲ್ಲ ಎಂಬ ಪ್ರತೀತಿ ಇದೆ.ಹಿಂದಿನಿಂದಲೂ ಮಠದಲ್ಲಿ ದಾಸೋಹ ನಿರಂತರವಾಗಿ ನಡೆದುಕೊಂಡು ಬಂದಿದೆ.ಸ್ವಾಮೀಜಿ ಅಂತಿಮ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಡುಗೆ ಸಿದ್ಧಪಡಿಸಿ ಅಲ್ಲಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಅದೇ ರೀತಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹಲವಾರು ಕಡೆಗಳಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ತುಮಕೂರು ನಗರ ಮತ್ತು ಕ್ಯಾತ್ಸಂದ್ರದಲ್ಲಿ ಸಂಘ-ಸಂಸ್ಥೆಗಳ ವತಿಯಿಂದ ಉಪಹಾರ ವಿತರಣೆ ಮಾಡಲಾಗುತ್ತಿದೆ.

ತುಮಕೂರು ನಗರದ ಕೆಲವು ಹೋಟೆಲ್‍ಗಳಲ್ಲೂ ಭಕ್ತರಿಗಾಗಿ ಉಚಿತ ತಿಂಡಿ-ಊಟ ವಿತರಿಸಲಾಗಿದೆ. ಮಠದ ಅನ್ನ ದಾಸೋಹ ನಿರಂತರವಾಗಿ ನಡೆದಿದೆ. ಬೆಳಗ್ಗೆ 5.30ರಿಂದ ಉಪಹಾರ ವಿತರಣೆ ಆರಂಭವಾಗಿದ್ದು, ಮಠದ ವಿದ್ಯಾರ್ಥಿಗಳು, ಭಕ್ತರಿಗೆ ಉಪಹಾರ ವಿತರಿಸುತ್ತಿದ್ದಾರೆ.ನಿನ್ನೆಯಿಂದಲೂ ನಿರಂತರವಾಗಿ ಅನ್ನ ದಾಸೋಹ ನಡೆಯುತ್ತಿದ್ದು, ಮಕ್ಕಳು ಕೂಡ ಅಡುಗೆ ಕೆಲಸಕ್ಕೆ ಕೈ ಜೋಡಿಸಿದ್ದಾರೆ.

ದಾಸೋಹವೇ ಮಠದಲ್ಲಿ ಶ್ರೇಷ್ಠ.ಇಲ್ಲಿಗೆ ಆಗಮಿಸುವ ಯಾವುದೇ ಭಕ್ತರು ಹಸಿವಿನಿಂದ ಹಿಂದಿರುಗಬಾರದು ಎಂಬುದು ಶ್ರೀಗಳ ಮಹದಾಸೆ. ಹಾಗಾಗಿ ಅವರು ದಾಸೋಹಕ್ಕೆ ಆದ್ಯತೆ ನೀಡುತ್ತಿದ್ದರು.ನಿನ್ನೆ ಕೂಡ ಅವರ ಲಿಂಗೈಕ್ಯದ ವಿಷಯವನ್ನು ಮಧ್ಯಾಹ್ನದ ದಾಸೋಹದ ನಂತರವೇ ಪ್ರಕಟಿಸಲಾಗಿತ್ತು. ಹಾಗಾಗಿ ಅಂತಿಮ ದರ್ಶನಕ್ಕೆ ಎಷ್ಟೇ ಲಕ್ಷ ಭಕ್ತರು ಆಗಮಿಸಲಿ, ಯಾರಿಗೂ ಪ್ರಸಾದದ ತೊಂದರೆಯಾಗಬಾರದು. ಎಲ್ಲರಿಗೂ ಪ್ರಸಾದ ಲಭ್ಯವಾಗುವಂತಿರಬೇಕು. ಹಾಗಾಗಿ ಸ್ವಯಂಪ್ರೇರಿತರಾಗಿ ಇಲ್ಲಿನ ಜನ ಪ್ರಸಾದ ಒದಗಿಸುತ್ತಿದ್ದಾರೆ. ಮಠದಲ್ಲಿ ದಾಸೋಹ ನಡೆಯುತ್ತಿದ್ದರೆ, ಸಂಘ-ಸಂಸ್ಥೆಗಳು, ಹೊಟೇಲ್‍ಗಳವರು, ವರ್ತಕರು ತಮ್ಮ ಕೈಲಾದ ಮಟ್ಟಿಗೆ ಬಂದವರಿಗೆ ಊಟ-ಉಪಹಾರಗಳನ್ನು ನೀಡಿ ಸ್ವಾಮೀಜಿಯವರ ಕೈಂಕರ್ಯದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ