ನವದೆಹಲಿ, ಜ.22-ಬಹು ಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದವರೂ ಸೇರಿದಂತೆ 20 ಅಧಿಕಾರಿಗಳನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಮಧ್ಯಂತರ ನಿರ್ದೇಶಕ ಎಂ. ನಾಗೇಶ್ವರ ರಾವ್ ವರ್ಗಾವಣೆ ಮಾಡಿದ್ದಾರೆ.
ಖಡಕ್ ಸಿಬಿಐ ವರಿಷ್ಠಾಧಿಕಾರಿಗಳಾದ ವಿವೇಕ್ ಪ್ರಿಯದರ್ಶಿ ಮತ್ತು ಎಸ್.ಕೆ.ನಾಯರ್ ಅವರನ್ನೂ ಸಹ ಪುನರ್ರಚನೆ ನೆಪದಲ್ಲಿ ಎತ್ತಂಗಡಿ ಮಾಡಲಾಗಿದೆ. ಕೇಂದ್ರದ ಮಾಜಿ ಸಚಿವರು ಮತ್ತು ಸರ್ಕಾರದ ಉನ್ನತಾಧಿಕಾರಿಗಳು ಶಾಮೀಲಾಗಿದ್ದಾರೆನ್ನಲಾದ ಬಹು ಕೋಟಿ 2-ಜಿ ಸ್ಪೆಕ್ಟ್ರಂ ಹಗರಣ ಹಾಗೂ ದೇಶಭ್ರಷ್ಟ ಆರ್ಥಿಕ ಅಪರಾಧಿಗಳಾದ ನೀರವ್ ಮೋದಿ ಮತ್ತು ಮೆಹಲ್ ಚೊಕ್ಸಿ ಎಸಗಿದ 13,500 ಕೋಟಿ ರೂ.ಗಳ ಪಿಎನ್‍ಬಿ ವಂಚನೆ ಪ್ರಕರಣಗಳನ್ನು ಈ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು.
ವಿವೇಕ್ ಪ್ರಿಯದರ್ಶಿ ಅವರನ್ನು ದೆಹಲಿಯಿಂದ ಚಂಡೀಗಢದ ಭ್ರಷ್ಟಾಚಾರ ನಿಗ್ರಹ ವಿಭಾಗ(ಎಸಿಬಿ)ಗೆ ವರ್ಗಾವಣೆ ಮಾಡಲಾಗಿದ್ದರೆ, ನಾಯರ್ ಅವರನ್ನು ಮುಂಬೈನ ಎಸಿಬಿಗೆ ಎತ್ತಂಗಡಿ ಮಾಡಲಾಗಿದೆ.