ಬೆಂಗಳೂರು, ಜ.22- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಸಂವಿಧಾನದ ಸಂಭಾಷಣೆಗಳು ಕುರಿತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು ಶಿವೈಕ್ಯರಾಗಿದ್ದು ಮತ್ತು ರಾಜ್ಯದಲ್ಲಿ ಶೋಕಾಚರಣೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲು ವಿರೋಧ ವ್ಯಕ್ತವಾಗಿತ್ತು.
ಕೆಲವು ಸಂಘಟನೆಗಳು ಕಾರ್ಯಕ್ರಮ ನಡೆಯುವ ಅಶೋಕ ಹೊಟೇಲ್ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದವು.
ಇದಕ್ಕೆ ಸ್ಪಷ್ಟನೆ ನೀಡಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ಖರ್ಗೆ ಅವರು, ಕಾರ್ಯಕ್ರಮವನ್ನು ರದ್ದು ಮಾಡಲಾಗುತ್ತಿದೆ.ಇದು ಪೂರ್ವನಿಗದಿಯ ಕಾರ್ಯಕ್ರಮವಾಗಿತ್ತು. ಇದರಲ್ಲಿ ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದ ಭಾಷಣಕಾರರು ಭಾಗವಹಿಸುತ್ತಿದ್ದರು.ಈ ಕಾರ್ಯಕ್ರಮದ ಜೊತೆ ಕರ್ನಾಟಕದ ಹೆಸರು ಕೂಡ ತಳಕು ಹಾಕಿಕೊಂಡಿರುತ್ತದೆ.ಏಕಾಏಕಿ ರದ್ದು ಮಾಡುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಇಂದು ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಉಪರಾಷ್ಟ್ರಪತಿಯವರಾದ ಹಮೀದ್ ಅನ್ಸಾರಿ ಅವರು ಭಾಷಣ ಮಾಡುತ್ತಾರೆ.ಆನಂತರ ಕಾರ್ಯಕ್ರಮ ರದ್ದು ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಕಾರ್ಯಕ್ರಮದ ಪ್ರತಿಯೊಂದು ವಿಚಾರ ಸಂಕಿರಣದಲ್ಲೂ ಎಲ್ಲಾ ವಿಚಾರಧಾರೆಗಳ ಭಾಷಣಕಾರರು ಮಾತನಾಡುತ್ತಾರೆ.ಆದರೆ ಕೇವಲ ಕೆಲವರ ಹೆಸರುಗಳನ್ನು ಮಾತ್ರ ವೈಭವಿಕರೀಸಲಾಗುತ್ತದೆ. ಬಲಪಂಥೀಯ ವಾದದ ಶೇಷಾದ್ರಿ ಅಯ್ಯರ್, ವಾಮಾನಾಚಾರ್ಯ ಕೂಡ ಭಾಷಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸಿದ್ದಗಂಗಾ ಮಠದ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲಿಂಗೈಕ್ಯರಾದ ಶ್ರೀಗಳಿಗೆ ನುಡಿನಮನ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಗಣ್ಯರು ಸಂತಾಪ ಸೂಚಿಸಿದರು.
ಶೋಕಾಚರಣೆ ಇರುವ ವೇಳೆಯು ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದಕ್ಕಾಗಿ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕುಮಾರ್ನಾಯಕ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.