ಬೆಂಗಳೂರು, ಜ.21-ತ್ರಿವಿಧ ದಾಸೋಹಿಯಾಗಿ ನಡೆದಾಡುವ ದೇವರೆಂದೇ ಜನಮಾನಸದಲ್ಲಿ ನೆಲೆಯಾಗಿದ್ದ ಸಿದ್ದಗಂಗಾ ಮಠದ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರು ಇನ್ನಿಲ್ಲವಾದುದು ಅತ್ಯಂತ ವಿಷಾದನೀಯ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಂತಾಪ ವ್ಯಕ್ತಪಡಿಸಿದರು.
ಹಲವು ಹತ್ತು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಶ್ರೀಗಳು ಗುರು ಶ್ರೇಷ್ಠರಾಗಿದ್ದರು. ಶತಾಯುಷಿ ಶ್ರೀಗಳು ತಮ್ಮ ಅಪ್ರತಿಮ ಸೇವಾ ಕೈಂಕರ್ಯದ ಮೂಲಕ ನಾಡನ್ನು ಪುನೀತಗೊಳಿಸುವ ಪವಿತ್ರ ಕಾರ್ಯದಲ್ಲಿ ನಿರತರಾಗಿದ್ದರು.
ಸಿದ್ದಗಂಗಾ ಮಠವನ್ನು ಜ್ಞಾನಕೇಂದ್ರವನ್ನಾಗಿ ರೂಪಿಸಿದ ಮಹಾಸ್ವಾಮೀಜಿಗಳ ನಿಧನ ನಾಡಿಗಷ್ಟೇ ಅಲ್ಲ, ಇಡೀ ಆಧ್ಯಾತ್ಮಿಕ ಲೋಕಕ್ಕೆ ಭರಿಸಲಾರದ ನಷ್ಟವಾಗಿದೆ.
ಭಗವಂತನು ಪರಮಪೂಜ್ಯರ ನಿಧನದಿಂದ ದುಃಖಿತರಾಗಿರುವ ಭಕ್ತ ವೃಂದಕ್ಕೆ ದುಃಖ ಸಹಿಸುವ ಶಕ್ತಿಯನ್ನು, ಮಹಾಸ್ವಾಮೀಜಿಗಳ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಆಶಿಸುತ್ತೇವೆ.