ಸಿದ್ದಗಂಗಾ ಶ್ರೀ ಶಿವೈಕ್ಯ: ಸಿಎಂ ಸಂತಾಪ: ಮೂರು ದಿನಗಳ ಕಾಲ ಶೋಕಾಚರಣೆ

ಬೆಂಗಳೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಡಿನ ಜನತೆಗೆ ನಡೆದಾಡುವ ದೇವರು ಎಂಬ ಭಾವನೆ ಮೂಡಿಸಿದ್ದ ಶ್ರೀಗಳು ಶಿವೈಕ್ಯರಾಗಿರುವುದು ತುಂಬಾ ದು:ಖವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ಹಲವಾರು ದಿನಗಳಿಂದ ಜವರಾಯನ ಜೊತೆಯಲ್ಲಿ ಹೋರಾಟ ಮಾಡಿ, ಪವಾಡ ನಿರ್ಮಿಸಿದ್ದರು ಎಂದರು.

ಸಿದ್ದಗಂಗಾ ಶ್ರೀಗಳ ನಿಧನ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದ್ದು, ತುಮಕೂರಿನಲ್ಲಿ ಮದ್ಯಾಹ್ನದಿಂದ ರಜೆ ಘೋಷಣೆ ಮಾಡಲಾಗಿದೆ. ನಾಳೆಯೂ ಸರ್ಕಾರಿ ರಜೆ ನೀಡಲಾಗಿದೆ ಎಂದರು.

ಶ್ರೀಗಳ ಚಿಕಿತ್ಸೆ ಮಾಡುವ ವೈದ್ಯರು ಈಗ ಅಧಿಕೃತವಾಗಿ ಪರಪೂಜ್ಯರ ವಿಧಿವಶವಾದ ವಿಷಯವನ್ನು ತಿಳಿಸಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಅಂತಿಮ ದರ್ಶನ ಪಡೆಯುವಾಗ ಉತ್ತಮ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ನಾಳೆ ಮದ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಳ್ಳಿ ಗಾಡಿನ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವದು. ಎಲ್ಲರೂ ಶಾಂತ ರೀತಿಯಿಂದ ಅಂತಿಮ ದರ್ಶನ ಪಡೆಯಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ರಾಜ್ಯಕ್ಕೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಶ್ರೀಗಳು ನಾಡಿನ ಮಕ್ಕಳಿಗೆ ಅಕ್ಷರ, ಅನ್ನದಾಸೋಹದ ಮೂಲಕ ಬಡವರ ನೋವಿಗೆ ಸ್ಪಂದಿಸಿದ್ದರು ಎಂದರು.

ಇದೇ ವೇಳೆ ಮಾತನಾಡಿದ ಬಿಎಸ್ ವೈ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ ಅವರ ಅಗಲಿಕೆ, ನಾಡಿಗೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಶ್ರೀಗಳನ್ನು ಕಳೆದುಕೊಂಡ ನಾಡು ಹಾಗೂ ನಾಡಿನ ಭಕ್ತರು ಬಡವಾಗಿದ್ದಾರೆ. ಶ್ರೀಗಳಿಗೆ ಭಾರತ ರತ್ನ ಕೊಡಬೇಕೆಂಬುದು ನಮ್ಮೆಲ್ಲರ ಒತ್ತಾಯ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಈ ಬಗ್ಗೆ ಹಲವಾರು ಬಾರಿ ಮಾತನಾಡಿದ್ದೇವೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ