ತುಮಕೂರು: ಅಕ್ಷರ, ಅನ್ನಾ ಹಾಗೂ ಜ್ಞಾನ ದಾಸೋಹದ ಮೂಲಕ ಹೊಸ ಕ್ರಾಂತಿಯನ್ನೇ ಮಾಡಿದ ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮೆದುರು ಇರುವ ನಡೆದಾಡುವ ದೇವರು. ಈ ಮಹಾನ್ ಚೇತನದ ದರ್ಶನ ಪಡೆದ ನೂರಾರು ಜನ ಗಣ್ಯಾತೀಗಣ್ಯರು ಇಂದು ನಮ್ಮ ನಡುವೆ ಇಲ್ಲ. ಆದರೆ ಶಿವಕುಮಾರ ಸ್ವಾಮೀಜಿ ಎಂಬ ಚೇತನ ಮಾತ್ರ ಇನ್ನೂ ನಮ್ಮ ನಡುವೆ ಇದ್ದು ನಾವು ಅವರನ್ನು ನೋಡುವ ಭಾಗ್ಯ ದೊರೆತೆದ್ದೇ ನಮ್ಮ ಸುದವೈ. ಅಂದಹಾಗೆ ಶ್ರೀಗಳು ಶ್ರೀಮಠದ ಜವಬ್ದಾರಿ ಹೊತ್ತಾಗ ಅವರ ಹಾದಿ ಕಲ್ಲುಮುಳ್ಳಿನದಾಗಿತ್ತು. ಅಂತಹ ಸಂದರ್ಬದಲ್ಲಿ ಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಇಂದು ನಾಡೇ ತನ್ನತ್ತ ತಿರುಗುವಂತೆ ಮಾಡಿದ್ದಾರೆ. ಅವರು ನಡೆದು ಬಂದ ಹಾಗೂ ಮಠದ ವೃತ್ತಾಂತದತ್ತ ಒಂದು ನೋಟ.
ಶ್ರೀ ಶಿವಕುಮಾರ್ ಸ್ವಾಮೀಜಿಗಳು ತಮ್ಮ 22 ನೇ ವಯಸ್ಸಿಗೆ ಮಠದ ಅಂಗಳಕ್ಕೆ ಆಗಮಿಸಿದರು. ಶ್ರೀಗಳ ಹಾದಿ ಅಷ್ಟೇನು ಸುಗಮವಾಗಿರಲಿಲ್ಲ. 1930 ಮಾರ್ಚ್ 3 ರಂದು ಉದ್ದಾನ ಶಿವಯೋಗಿಗಳು ಶ್ರೀ ಮಠದ ನಿರಂಜನ ಜಂಗಮಾಧಿಕಾರವನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಒಪ್ಪಿಸಿ ಹರಸಿ ಆಶೀರ್ವಾದಿಸಿದರು. ಆ ಸಂದರ್ಭದಲ್ಲಿ ಶ್ರೀಗಳು ಮಠದ ಏಳ್ಗೆಗಾಗಿ ಕಲ್ಲು ಮುಳ್ಳಿನ ಹಾದಿ ತುಳಿಯಬೇಕಾಯಿತು. ಮಕ್ಕಳ ವಸತಿ, ಊಟಕ್ಕಾಗಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಹಣದಲ್ಲಿ ಮಠದ ಮಕ್ಕಳನ್ನು ಸಾಕಿದ್ದಾರೆ. 30 ವರ್ಷಗಳ ಹಿಂದೆ ತುಮಕೂರಿನಾದ್ಯಂತ ಬರಗಾಲದ ಛಾಯೆ ಆವರಿಸಿತ್ತು. ಪ್ಲೇಗ್ ರೋಗಕ್ಕೆ ಜನರು ತುತ್ತಾಗಿದ್ದರು. ಆಗ ಊರುರುಗಳಿಗೆ ಕುದುರೆ ಮೇಲೆ ಹೋಗಿ ಭಿಕ್ಷಾಟನೆ ಮಾಡಿ, ಜನರಿಗೆ ಅನ್ನ ಹಾಕಿ ಸಾಕಿದ್ದಾರೆ. ಈಗಲೂ ಸಹ ಶಿವರಾತ್ರಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ತುಮಕೂರಿನ ಜನ ಮಠಕ್ಕೆ ಹೋಗಿಯೇ ಪ್ರಸಾದ ಸೇವಿಸುತ್ತಾರೆ.
ಸ್ವಾಮೀಜಿ ವಾಸ್ತವ್ಯ ಮಾಡುತ್ತಿದ್ದ ಹಳೇ ಮಠದ ಜೊತೆಗೆ ಮೂರ್ನಾಲ್ಕು ಕಟ್ಟಡಗಳನ್ನು ಬಿಟ್ಟರೆ ಯಾವ ಬೃಹತ್ ಕಟ್ಟಡಗಳು ಆಗ ತಲೆ ಎತ್ತಿರಲಿಲ್ಲ. ಅಂಥಹ ಸಂದರ್ಭದಲ್ಲಿ ಸ್ವತಃ ಶ್ರೀಗಳೇ ಕಟ್ಟಡ ಕಾಮಗಾರಿಗಳನ್ನು ನೋಡಿಕೊಂಡು ಅವರಿವರಿಂದ ದೇಣಿಗೆ ಸಂಗ್ರಹಿಸಿ ಕಟ್ಟಿದ್ದಾರೆ. ಕೆಲವೊಮ್ಮೆ ತಾವೇ ಕಲ್ಲು ಇಟ್ಟಿಗೆಗಳನ್ನು ಎತ್ತಿಕೊಟ್ಟು ಕಟ್ಟಡಗಳನ್ನು ಕಟ್ಟಿದ್ದಾರೆ. ಆಗ ಸಿದ್ದಗಂಗಾ ಮಠದ ಸಮುದಾಯವೇ ಅವರ ಜೊತೆ ಕೈ ಜೋಡಿಸಿದೆ. ಇದರ ಜೊತೆಗೆ ಮಠದ ವಿದ್ಯಾರ್ಥಿಗಳನ್ನು ಸಾಕಲು, ತಾವೇ ಹೊಲ ಉಳುಮೆ ಮಾಡಿ ರಾಗಿ ಬೆಳೆದಿದ್ದಾರೆ. ಮುಂದೆ ನಿಂತು ಕೆಲಸ ಮಾಡಿಸಿದ್ದಾರೆ. ಅಡುಗೆ ಮಾಡಲು ಬೇಕಾದ ಸೌದೆಗಳನ್ನು ಹೊತ್ತು ತಂದು ಸ್ವತಃ ತಾವೇ ಸೌದೆಗಳನ್ನು ಒಡೆದು ಕೊಟ್ಟಿದ್ದಾರೆ ಶ್ರೀಗಳ ಈ ಸೇವೆಯನ್ನು ಕಣ್ಣಾರೆ ಕಂಡವರು ಇಂದು ಕಣ್ಣಿಗೆ ಕಟ್ಟುವಂತೆ ಹೇಳುವಾಗ ನಿಜವಾಗಲೂ ಶ್ರೀಗಳ ಸೇವೆಯ ಬಗ್ಗೆ ಹೆಮ್ಮೆ ಪಡುವಂತಾಗುತ್ತದೆ.
ಹೊಲ ಉಳುವುದು ಹಾಗೂ ಸೌದೆ ಹೊಡೆಯುವುದು ಒಂದೆಡೆಯಾದರೆ, ಶ್ರೀಗಳು ಒಳ್ಳೆಯ ಇಂಗ್ಲೀಷ್ ಭಾಷಾ ಶಿಕ್ಷಕರು ಕೂಡಾ. ಹೌದು ಶ್ರೀಗಳು ಇಂಗ್ಲೀಸ್ ಮೇಲೆ ಸಾಧಿಸಿರುವ ಹಿಡಿತ ಇಂದಿಗೂ ಅಚ್ಚರಿ ಮೂಡಿಸುತ್ತದೆ. 60 ರ ದಶಕದಲ್ಲಿ ಶ್ರೀಗಳು ಮಠದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬೋಧನೆ ಮಾಡುತ್ತಿದ್ದರು. ಅವರ ಪಾಠ ಕೇಳಿದ ವಿದ್ಯಾರ್ಥಿಗಳು ಇಂದು 50-60 ವರ್ಷ ಪೂರೈಸಿದ್ದಾರೆ. ಮತ್ತೊಂದು ಕುತೂಹಲ ಮೂಡಿಸುವ ವಿಷಯವೆಂದರೆ ಅವರ ಸೂಕ್ಷ್ಮ ಗ್ರಹಿಕೆ ಹಾಗೂ ನೆನಪಿನ ಶಕ್ತಿ. ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಓದಿ ಇಂದು ದೇಶದ ಅತ್ಯುನ್ನತ ಪದವಿಗಳಲ್ಲಿದ್ದಾರೆ. ಅಂಥಹ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನು ನೆನಪಿಟ್ಟುಕೊಂಡಿದ್ದಾರೆ. ಇಂತಹ ಹತ್ತಾರು ವಿಚಾರಗಳು ಸ್ವಾಮೀಜಿಯ ದೈವಿ ಶಕ್ತಿಗೆ ಹಿಡಿದ ಕೈಗನ್ನಡಿ.