ಬೆಂಗಳೂರು, ಜ.21- ರೆಸಾರ್ಟ್ನಲ್ಲಿ ಪಾರ್ಟಿ ವೇಳೆ ನಡೆದ ಶಾಸಕರ ಹೊಡೆದಾಟದಿಂದ ಕಂಗೆಟ್ಟಿರುವ ಕಾಂಗ್ರೆಸ್ ದಿಢೀರನೆ ಇಂದು ಶಾಸಕಾಂಗ ಸಭೆ ನಡೆಸಿದೆ.
ಸರ್ಕಾರಕ್ಕೆ ಸದ್ಯಕ್ಕೆ ಆಪರೇಷನ್ ಕಮಲದ ಭೀತಿ ಕಡಿಮೆಯಾಗಿದ್ದರೂ, ರಾಜ್ಯ ಕಾಂಗ್ರೆಸ್ ನಾಯಕರಿಗೆ ತಲೆನೋವು ದೂರವಾಗಿಲ್ಲ. ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆಯಬೇಕಾಗಿದ್ದ ಸಭೆ ತಡವಾಗಿ ಅರಂಭಗೊಂಡಿತ್ತು. ಕೆಲವು ಸಚಿವರು, ಶಾಸಕರು ಹೊರಗಿರುವ ಕಾರಣ ಅವರಿಗಾಗಿ ಕೆಲ ಕಾಲ ಕಾಯಲಾಯಿತು. ಔಪಚಾರಿಕವೆಂಬಂತೆ ಕೆಲವೊತ್ತು ಸಭೆ ನಡೆಸಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು.
ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಲಾಯಿತು. ರೆಸಾರ್ಟ್ನಲ್ಲಿ ನಡೆದ ಶಾಸಕರ ನಡುವಿನ ಗಲಾಟೆ ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬ ಶಾಸಕರು ಜನಪತ್ರಿನಿಧಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಮ್ಮದೇ ಆದ ಇತಿ ಮಿತಿಯಲ್ಲಿ ಇರಬೇಕೆಂದು ನಾಯಕರು ನಿರ್ದೇಶನ ನೀಡಿದ್ದಾರೆ.
ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿರುವ ಮಾಹಿತಿಗಳಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ.ಕೆಲವು ಶಾಸಕರು ತಾವು ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ದರ್ಶನಕ್ಕೆ ತೆರಳಬೇಕೆಂದು ಪಟ್ಟು ಹಿಡಿದಿದ್ದು, ಅವರಿಗೆ ರೆಸಾರ್ಟ್ನಿಂದ ತೆರಳು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.