ಬೆಂಗಳೂರು, ಜ.21- ಬಿಡದಿಯ ಈಗಲ್ಟನ್ ರೆಸಾಟ್ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ದೂರು ನೀಡಲು ಅವರ ಕುಟುಂಬ ಸದಸ್ಯರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದು ಅವರ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿದೆ.
ಒಮ್ಮೆ ದೂರು ದಾಖಲಾದರೆ, ಕಂಪ್ಲಿ ಶಾಸಕ ಗಣೇಶ್ ಮೇಲೆ ಆರೋಪ ಕೇಳಿ ಬಂದಿರುವುದರಿಂದ ಅವರು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಕಾಂಗ್ರೆಸ್ ನಾಯಕರೂ ತೊಡಗಿದ್ದಾರೆ. ಮುಂದೇನಾಗುತ್ತದೋ ಎಂಬ ಲೆಕ್ಕಾಚಾರವೂ ಶುರುವಾಗಿದೆ.
ಗಣೇಶ್ ಸ್ಪಷ್ಟನೆ: ಅಂದು ಊಟ ಮಾಡುವ ವೇಳೆ ಶಾಸಕ ಭೀಮಾ ನಾಯಕ್ ಹಾಗೂ ಆನಂದ್ ಸಿಂಗ್ ನಡುವೆ ಏರು ದನಿಯಲ್ಲಿ ವಾಗ್ವಾದ ನಡೆದಿತ್ತು. ಇದನ್ನು ಬಿಡಿಸಲು ಹೋಗಿದ್ದೆ ಅಷ್ಟೆ. ಹಲ್ಲೆ ಅಥವಾ ಮಾರಾಮಾರಿ ಯಾವುದು ನಡೆದಿಲ್ಲ ಎಂದು ಕಂಪ್ಲಿ ಶಾಸಕ ಗಣೇಶ್ ಸ್ಪಷ್ಟನೆ ನೀಡಿದ್ದಾರೆ.
ಆನಂದ್ಸಿಂಗ್ ನನಗೆ ಅಣ್ಣ ಇದ್ದಂತೆ.ಅವರ ಬಗ್ಗೆ ಅಪಾರ ಗೌರವವಿದೆ.ಅವರಿಗೆ ಬಾಟಲಿಯಿಂದ ಹೊಡೆದೆ ಮತ್ತು ಗನ್ಮ್ಯಾನ್ಗೆ ಕಚ್ಚಿದೆ ಎಂಬುದೆಲ್ಲಾ ಊಹಾಪೋಹ ಎಂದು ಹೇಳಿದ್ದಾರೆ.
ಆನಂದ್ಸಿಂಗ್ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಭೀಮಾ ನಾಯಕ್ ಮತ್ತು ಅವರ ಗಲಾಟೆ ನಡೆದಿರುವುದಲ್ಲಿ ಇದರಲ್ಲಿ ನನ್ನ ಪಾತ್ರವಿಲ್ಲ. ಇದರಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.