ಬೆಂಗಳೂರು, ಜ.21- ಹಿಂದಿನ ಕಾಲದ ವ್ಯವಸ್ಥೆಯ ಬಗ್ಗೆ ಅಂಬಿಗರ ಚೌಡಯ್ಯ ಅತ್ಯಂತ ಕಟುವಾಗಿ ತಮ್ಮ ವಚನಗಳಲ್ಲಿ ಟೀಕೆ ಮಾಡಿದ್ದರು. ಆದರೂ ಸಮಾಜ ಬದಲಾವಣೆ ಕಾಣಲಿಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಬಲವಂತರಾವ್ ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಅವರು ಬಸವಣ್ಣ ಹಾಗೂ ಇತರ ವಚನಕಾರರಿಂತಲೂ ಸಮಾಜದ ಒಳಹುಗಳನ್ನು ಅತ್ಯಂತ ಕಟುವಾಗಿ ಟೀಕಿಸಿದರು. ಸಮಾಜದಲ್ಲಿದ್ದ ವ್ಯವಸ್ಥೆ ಸರಿಯಾಗಬೇಕು ಎಂದು ಬಯಸಿದ್ದರು. ಆದರೂ ಸಮಾಜ ನಾಯಿ ಬಾಲ ಟೋಂಕು ಎಂಬಂತೆ ಬದಲಾಗಲಿಲ್ಲ ಎಂದು ಹೇಳಿದರು.
ಈವರೆಗೂ ಚೌಡಯ್ಯ ಅವರ ನಾಲ್ಕು ನೂರು ವಚನಗಳು ಮಾತ್ರ ಸಿಕ್ಕಿವೆ. ಅದರಲ್ಲಿ ನೂರು ವಚನಗಳು ಮಾತ್ರ ಇಲಾಖೆ ವಚನ ಸಂಪುಟದಲ್ಲಿದೆ. ಅವರ ವಚನಗಳನ್ನು ಇನ್ನಷ್ಟು ಅಧ್ಯಯನ ನಡೆಸಬೇಕು ಎಂದರು.
ಅಂಬಿಗರ ಚೌಡಯ್ಯ ಜಾತಿ ವಿರುದ್ಧ ಮಾತನಾಡಿದರು.ಆದರೆ ಈಗ ಅಂಬಿಗರ ಚೌಡಯ್ಯನವರನ್ನು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅದನ್ನು ತಪ್ಪಿಸಬೇಕಿದೆ. ಶರಣರು ಪ್ರತಿಪಾದಿಸಿದ ಜಾತಿ ರಹಿತ, ಮೌಢ್ಯ ರಹಿತ ಸಮಾಜದ ನಿರ್ಮಾಣಕ್ಕೆ ಎಲ್ಲರು ಅಂಬಿಗರ ಚೌಡಯ್ಯ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಹಾವೇರಿ ಜಿಲ್ಲೆ ನರಸೀಪುರ ನಿಜಶರಣಾಂಬಿಗರಚೌಡಯ್ಯ ಪೀಠದ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿ, ಬಸವಕಲ್ಯಾಣ ಕ್ಷೇತ್ರದ ಶಾಸಕ ವಿ.ನಾರಾಯಣರಾವ್, ವಿಧಾನ ಪರಿಷತ್ನ ಸದಸ್ಯ ರವಿಕುಮಾರ್, ಗಂಗಾಮತಸ್ಥ ಸಂಘದ ಅಧ್ಯಕ್ಷ ಮೌಲಾಲಿ, ಬೆಂಗಳೂರು ನಗರದ ಗಂಗಾಮತಸ್ಥ ಸಂಘದ ಅಧ್ಯಕ್ಷ ಜಿ.ಟಿ.ವೆಂಟಕೇಶ್, ಮೀನುಗಾರ ಸಂಘ ಅಧ್ಯಕ್ಷ ಲಿಂಗರಾಜು, ಉತ್ತರ ಕರ್ನಾಟ ಗಂಗಾಮತಸ್ಥ ಸಂಘದ ಅಧ್ಯಕ್ಷ ಗೌತಮ ಆರ್. ಚೌದರಿ, ಡಾ.ಎಸ್.ಕೆ.ಮೇಲ್ಕರ್ ಮತ್ತಿತರರು ಉಪಸ್ಥಿತರಿದ್ದರು.