ಬೆಂಗಳೂರು, ಜ.20- ರಾಮಾಯಣ ಮತ್ತು ಮಹಾಭಾರತದಂತಹ ಮಹಾನ್ ಗ್ರಂಥಗಳನ್ನು ಅನುಸರಿಸಿ ಕೃತಿ, ಕಾದಂಬರಿ ರಚಿಸುವವರಿಗಿಂತಲೂ ಮಹಾನ್ ಗ್ರಂಥಗಳಲ್ಲಿನ ಪಾತ್ರಗಳನ್ನು ವಿಸ್ತೃತವಾಗಿ ಚಿತ್ರಿಸುವ ಲೇಖಕರೇ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾದಂಬರಿಕಾರ ಎಂ.ವೀರಪ್ಪಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ತರಳಬಾಳು ಕೇಂದ್ರದಲ್ಲಿ ಶಿವರಾಂಕಾರಂತರ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ 26ನೇ ವರ್ಷದ ವೇದಿಕೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯದಲ್ಲಿದ್ದರೂ ಸಾಹಿತ್ಯದ ಗೀಳನ್ನು ರೂಢಿಸಿಕೊಂಡಿದ್ದರ ಬಗ್ಗೆ ಹಲವಾರು ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನನಗೆ ಓದು ಮತ್ತು ಬರೆಯುವ ಅಭ್ಯಾಸ ಬಂದಿದ್ದು ತಾಯಿಯ ಮೂಲಕ.ನಾನು ಬಾಲ್ಯದಲ್ಲಿದ್ದಾಗ ತಾಯಿ ನನ್ನನ್ನು ನಾಲ್ಕು ಗಂಟೆಗೆ ಎಬ್ಬಿಸಿ ಓದು ಮತ್ತು ಬರೆಯಲು ಪ್ರೇರೆಪಿಸಿದರು.ಆಗ ನಾನು ಆ ದಿನದ ಚಟುವಟಿಕೆಗಳ ಬಗ್ಗೆ ಬರೆದುಕೊಳ್ಳಲಾರಂಭಿಸಿದೆ.ಅದು ಹವ್ಯಾಸವಾಗಿ ನನಗೆ ಸಾಹಿತ್ಯದತ್ತ ಆಕರ್ಷಣೆ ಉಂಟು ಮಾಡಿತು.ಶ್ರೀ ರಾಮಾಯಣದರ್ಶನಂ ಕಾದಂಬರಿ ಬರೆದಾಗ ಬಹಳಷ್ಟು ಮಂದಿ ವಿಮರ್ಶೆ ಮಾಡಿದರು ಎಂದರು.
ರಾಮಾಯಣದಲ್ಲಿನ ಪಾತ್ರಗಳನ್ನು ವಿಶ್ಲೇಷಣಾತ್ಮಕವಾಗಿ ನಾನು ಬರೆದಿದ್ದೆ.ಆದರೆ, ಇತ್ತೀಚಿನ ದಿನಗಳಲ್ಲಿ ಪಾತ್ರದ ನೈಜ್ಯತೆಯನ್ನು ಹೊರತುಪಡಿಸಿ ನಕಾರತ್ಮಕವಾಗಿ ಮತ್ತು ವಿಕೃತವಾಗಿ ಚಿತ್ರಿಸುವವರ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಇದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಕೃತಿಗಳನ್ನು ಬರೆದಾಗ ಅದರ ಅಂತಃಸತ್ವವನ್ನು ನೋಡುವ ಬದಲಾಗಿ ಬರೆದ ವ್ಯಕ್ತಿ ಯಾವ ಜಾತಿಗೆ ಸೇರಿದವನು ಎಂಬ ಚರ್ಚೆಗಳು ಆರಂಭಗೊಳ್ಳುತ್ತವೆ. ಬಹಳಷ್ಟು ಮಂದಿ ಇದು ನಮ್ಮ ಜಾತಿಯವರೇ ಎಂದು ಪ್ರಶ್ನೆ ಮಾಡುವವರೂ ಇದ್ದಾರೆ. ಸಾಹಿತಿಗಳಲ್ಲಿ ಪರಸ್ಪರ ಬೆಂಬಲಿಸುವ, ಪ್ರೇರೆಪಿಸುವ ಮನೋಧರ್ಮ ಬದಲಾಗಿದೆ.ಕಾಲೆಳೆಯುವುದು, ಕುಹುಕವಾಡುವುದೇ ಹೆಚ್ಚಾಗಿದೆ.ನನಗೆ ಸರಸ್ವತಿ ಸನ್ಮಾನ್ ಪ್ರಶಸ್ತಿ ಬಂದಾಗ ಬಹಳಷ್ಟು ಮಂದಿ ಮೊಯ್ಲಿ ಸರಸ್ವತಿ ಪುತ್ರನಲ್ಲ, ಶೂದ್ರ ಪುತ್ರ ಎಂದು ಲೇವಡಿ ಮಾಡಿದರು.ಆದರೆ, ನಾನು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದೆ ಎಂದರು.
ನಾವು ಶೂದ್ರ ಪುತ್ರರೂ ಹೌದು.ಶುದ್ಧ ಪುತ್ರರೂ ಹೌದು.ಬಹಳಷ್ಟು ಮಂದಿಗೆ ತಮ್ಮನ್ನು ತಾವು ಶುದ್ಧ ಪುತ್ರರಂದು ಹೇಳಿಕೊಳ್ಳುವ ಅರ್ಹತೆ ಇರುವುದಿಲ್ಲ, ಹಾಗಾಗಿ ನಾನು ಶೂದ್ರ ಪುತ್ರ ಎಂದು ಹೇಳಿಕೊಳ್ಳಲು ಯಾವ ಹಿಂಜರಿಕೆಯೂ ಇಲ್ಲ ಎಂದು ಹೇಳಿದರು.
ಸಾಹಿತ್ಯ ಕೃಷಿಯಲ್ಲಿ ನನಗೆ ಶಿವರಾಮಕಾರಂತರೇ ಪ್ರೇರಣೆ.ಅವರು ನಗಣ್ಯ ಪಾತ್ರಗಳಿಗೂ ಹೆಚ್ಚಿನ ಒತ್ತು ಕೊಟ್ಟು ಬರೆಯುವ ಮೂಲಕ ಕಾದಂಬರಿಗೆ ಹೊಸ ಆಯಾಮ ಕೊಡುವ ಸಂಪ್ರದಾಯವನ್ನು ಹುಟ್ಟು ಹಾಕಿದರು.ನಾನು ಬರೆದ ರಾಮಾಯಣದರ್ಶನಂ ಕೃತಿಯಲ್ಲಿ ಇದೇ ರೀತಿ ಸಣ್ಣ ಸಣ್ಣ ಪಾತ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಶಿವರಾಮ ಕಾರಂತರು 21ನೇ ಶತಮಾನ ಕಂಡ ಅತ್ಯದ್ಭುತ ಕಾದಂಬರಿಕಾರ.ಅವರ ಕಾಲದಲ್ಲೂ ಕಾಲೆಳೆಯುವವರು, ಕುಹುಕವಾಡುವವರೂ ಇದ್ದರು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಮೊದಲು ಹಾದಿಬೀದಿಯಲ್ಲಿ ಓಡಾಡುವವರಿಗೆಲ್ಲಾ ಕೊಡುತ್ತಿದ್ದರು.ನಾನು ಮುಖ್ಯಮಂತ್ರಿಯಾಗಿದ್ದಾಗ ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿ ಕನ್ನಡ ರಾಜ್ಯೋತ್ಸವದ ವಾರ್ಷಿಕೋತ್ಸವದ ಸಂಖ್ಯೆಗನುಗುಣವಾಗಿ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಿದೆ.ಅದಕ್ಕೆ ಸಲಹೆ, ಸೂಚನೆ ನೀಡಿದ್ದ್ದೇ ಕಾರಂತರು.ಅಂದಿನಿಂದ ಇಂದಿನವರೆಗೂ ವರ್ಷದ ಸಂಖ್ಯೆಗನುಗುಣವಾಗಿಯೇ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಸಾಹಿತಿ ಬೆಳಗೋಡು ರಮೇಶ್‍ಭಟ್, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷ ಬಿ.ವಿ.ಕೆದಿಲಾಯ, ಕಾರ್ಯದರ್ಶಿ ಚಂದ್ರಶೇಖರ ಚಡಗ, ಖಜಾಂಚಿ ಚಂದ್ರಶೇಖರ ಕಾರಂತ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.