ಬೆಂಗಳೂರು,ಜ.19-ಆಪರೇಷನ್ ಕಮಲದ ಭೀತಿಯಿಂದಲೇ ನಮ್ಮ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ. ದೆಹಲಿಯಲ್ಲಿ ಕೂಡಿ ಹಾಕಲಾಗಿರುವ ಬಿಜೆಪಿ ಶಾಸಕರನ್ನು ಬಿಡುಗಡೆ ಮಾಡಿದ ನಂತರವೇ ನಮ್ಮ ಶಾಸಕರು ಬಿಡುಗಡೆಯಾಗುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲೇ ಇದ್ದಾರೆ.ದೆಹಲಿಗೆ ಹೋಗಿಲ್ಲ. ರೆಸಾರ್ಟ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವುದಿಲ್ಲ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂವಾದ ನಡೆಸಲಾಗುತ್ತದೆ.ಶಾಸಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ.
ಬಿಜೆಪಿಯವರು ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರು ಇಂತಹ ಕೆಲಸಕ್ಕೆ ಕೈ ಹಾಕದೆ ಇದ್ದಿದ್ದರೆ ಯಾರೂ ಸಹ ರೆಸಾರ್ಟ್ಗೆ ಹೋಗುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿರಬೇಕು ಎಂಬ ಉದ್ದೇಶಕ್ಕೆ ರೆಸಾರ್ಟ್ಗೆ ಕಳುಹಿಸಲಾಗಿದೆ ಎಂದರು.
ಒಂದೇ ರೆಸಾರ್ಟ್ನಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದ್ದರಿಂದ ಎರಡು ರೆಸಾರ್ಟ್ನಲ್ಲಿ ಇರಿಸಲಾಗಿತ್ತು.ಇಂದು ಒಂದೇ ರೆಸಾರ್ಟ್ಗೆ ಸ್ಥಳಾಂತರಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮನೆಗಳಲ್ಲೂ ಸಹ ಅಷ್ಟು ಜನರು ಒಂದೆಡೆ ಇರಿಸಲು ಸಾಧ್ಯವಿಲ್ಲ. ಹಾಗಾಗಿ ರೆಸಾರ್ಟ್ಗೆ ಬರಲಾಗಿದೆ ಎಂದು ಹೇಳಿದರು.
ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ಗೈರಾದವರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೋಟೀಸ್ ನೀಡಿದ್ದಾರೆ.ಅದಕ್ಕೆ ಉತ್ತರ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.