ಬೆಂಗಳೂರು,ಜ.19-ಕಳಪೆ ಟೆಂಡರ್ಶೂರ್ ರಸ್ತೆ ಕಾಮಗಾರಿಯ ಬಿಲ್ ತಡೆಹಿಡಿದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ತಿಳಿಸಿದರು.
ಯಡಿಯೂರು ವೈದಿಕ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಯನಗರ 11 ಮತ್ತು 12ನೇ ಮುಖ್ಯರಸ್ತೆ ಸಮೀಪ ಆಗಿರುವ ಟೆಂಡರ್ ಶೂರ್ ರಸ್ತೆ ಕಳಪೆಯಾಗಿದೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಆ ಕಾಮಗಾರಿ ತಡೆ ಹಿಡಿಯುವಂತೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಒಂದು ವೇಳೆ ಕಳಪೆ ಕಾಮಗಾರಿ ಆಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗುತ್ತಿಗೆದಾರರಿಗೆ ಉತ್ಕøಷ್ಟ ಕಾಮಗಾರಿ ಮಾಡಲು ಸೂಚಿಸುತ್ತೇನೆ. ಒಂದು ವೇಳೆ ಇದನ್ನು ಪಾಲನೆ ಮಾಡದೆ ಇದ್ದರೆ ಬಿಲ್ ತಡೆ ಹಿಡಿಯುತ್ತೇನೆ ಎಂದು ಹೇಳಿದರು.
ದಂಡ ವಿಧಿಸುವ ಮುನ್ನ ಎಚ್ಚರಿಕೆ ವಹಿಸಿ: ಸ್ವಚ್ಛತೆ ಬಗ್ಗೆ ನಮ್ಮ ನಾಗರಿಕರಿಗೆ ಇನ್ನೂ ತಿಳುವಳಿಕೆ ಬಂದಿಲ್ಲ. ಎಲ್ಲೆಂದರಲ್ಲಿ ಕಸ ಹಾಕುತ್ತಾರೆ. ಗಿಡಗಳ ಸುತ್ತ ಹಾಕಿರುವ ರಕ್ಷಣಾ ಬೇಲಿಯೊಳಗೆ ಪ್ಲಾಸ್ಟಿಕ್ ತುಂಬುತ್ತಾರೆ ಎಂದು ಮೇಯರ್ ಬೇಸರ ವ್ಯಕ್ತಪಡಿಸಿದರು.