ರೆಸಾರ್ಟ್ ನಲ್ಲಿ ಮುಂದುವರೆದ ಕಾಂಗ್ರೇಸ್ ಶಾಸಕಾಂಗ ಸಭೆ

ಬೆಂಗಳೂರು, ಜ.19-ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. ಶಾಸಕರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ಕೊಡದೆ ಏಕಾಏಕಿ ಎಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಸ್ಥಳಾಂತರಿಸಲಾಗಿತ್ತು.

ಬಹಳಷ್ಟು ಶಾಸಕರು ಅಭಿಪ್ರಾಯ ಹೇಳಲು ಮುಂದಾದರಾದರೂ ಅದಕ್ಕೆ ಅವಕಾಶ ಕೊಟ್ಟರೆ ಗೊಂದಲ ಉಂಟಾಗಬಹುದು, ಹಾಗೂ ಅನಗತ್ಯವಾಗಿ ಗೋಜಲು ಪರಿಸ್ಥಿತಿ ನಿರ್ಮಾಣವಾಗಿ ಕೆಲವರು ಸಭೆ ಬಹಿಷ್ಕರಿಸಿ ಬಿಜೆಪಿ ಪಾಳೆಯ ಸೇರಬಹುದೆಂಬ ಆತಂಕದಿಂದ ಯಾರಿಗೂ ಮಾತನಾಡಲು ಅವಕಾಶ ನೀಡದೆ ನೇರವಾಗಿ ರೆಸಾರ್ಟ್‍ಗೆ ಕರೆತರಲಾಗಿತ್ತು.

ಇಂದು ರೆಸಾರ್ಟ್‍ನಲ್ಲಿ ಶಾಸಕಾಂಗ ಸಭೆ ಮುಂದುವರೆದಿದ್ದು ಎಲ್ಲರಿಗೂ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತಿದೆ.
ನಿನ್ನೆ ರಾತ್ರಿಯಿಂದಲೂ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರತಿಯೊಬ್ಬ ಶಾಸಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಹಣ-ಅಧಿಕಾರದ ಆಸೆಯಿಂದಾಗಿ ಈ ಮೊದಲು ಆಪರೇಷನ್ ಕಮಲಕ್ಕೆ ತುತ್ತಾದ ವಿವಿಧ ಶಾಸಕರ ಸ್ಥಿತಿ ಏನಾಗಿದೆ. ಅವರ ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಮೇಲಾದ ದುಷ್ಪರಿಣಾಮಗಳೇನು ಎಂಬೆಲ್ಲಾ ಮಾಹಿತಿಯನ್ನು ಅತೃಪ್ತ ಶಾಸಕರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ರಾಜಕೀಯ ಹೊಂದಾಣಿಕೆಯ ಕಾರಣಕ್ಕಾಗಿ ಆಯ್ದ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಎರಡೂವರೆ ವರ್ಷದ ನಂತರ ಸಂಪುಟ ಪುನಾರಚನೆಯಾಗಲಿದೆ. ಆ ವೇಳೆ ಬಾಕಿ ಉಳಿದ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು. ಯಾರಿಗೂ ನಿರಾಸೆಯಾಗದಂತೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡುತ್ತಿದ್ದಾರೆ.

ಶತಾಯಗತಾಯ ಶಾಸಕರ ಮನಪರಿವರ್ತಿಸಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಒಂದು ವೇಳೆ ಮನವೊಲಿಕೆಗೆ ಜಗ್ಗದೆ ಹೋದರೆ ಅಂತಹ ಶಾಸಕರಿಗೆ ಕಾನೂನಾತ್ಮಕವಾಗಿ ಎದುರಾಗವ ಸಮಸ್ಯೆಗಳ ಬಗ್ಗೆ ನಾಯಕರು ವಿವರಿಸುತ್ತಿದ್ದು, ಪಕ್ಷದ ಆದೇಶ ಪಾಲಿಸದಿದ್ದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ.
ಕೆಲವು ಶಾಸಕರು ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅಂಥವರಿಗೆ ಯಾವ ರೀತಿಯ ನೆರವು ನೀಡಬೇಕೆಂಬ ಬಗ್ಗೆಯೂ ನಾಯಕರು ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಶಾಸಕರಿಗೆ ಸಾಮ-ವೇದ-ದಂಡ ಸೂತ್ರ ಆಧರಿಸಿ ಸಮ್ಮಿಶ್ರ ಸರ್ಕಾರ ಮುನ್ನೆಡೆಸುವ ಪ್ರಯತ್ನ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ