ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಯಡಿಯೂರಪ್ಪ

ಬೆಂಗಳೂರು,ಜ.19- ಯಾವುದೇ ಕಾರಣಕ್ಕೂ ನಾನು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕೈ ಹಾಕುವುದಿಲ್ಲ. ಈ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಯಾವುದೇ ರೀತಿಯ ಸಂಶಯ ಬೇಡ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಅನುಮಾನವನ್ನು ಯಾರೊಬ್ಬರೂ ಇಟ್ಟುಕೊಳ್ಳುವ ಅಗತ್ಯವಿಲ್ಲ. ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ತಮ್ಮ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಪತನವಾದರೆ ದೊಡ್ಡ ಪಕ್ಷವಾಗಿರುವ ನಾವು ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ಸದ್ಯಕ್ಕೆ ಸರ್ಕಾರ ಸುಭದ್ರವಾಗಿದೆ ಎಂದು ಎರಡು ಪಕ್ಷಗಳ ನಾಯಕರೇ ಹೇಳುತ್ತಿರುವಾಗ ಆಪರೇಷನ್ ಕಮಲದ ಮಾತೇಕೆ ಎಂದು ಪ್ರಶ್ನಿಸಿದರು.

ಗುರುಗ್ರಾಮದಲ್ಲಿರುವ ಶಾಸಕರನ್ನು ಬೆಂಗಳೂರಿಗೆ ವಾಪಸ್ ಬರುವಂತೆ ನಾನೇ ಸೂಚಿಸಿದ್ದೇನೆ. ಇಂದು ಮಧ್ಯಾಹ್ನದ ವೇಳೆಗೆ ಎಲ್ಲ ಶಾಸಕರು ಬೆಂಗಳೂರಿಗೆ ಹಿಂತಿರುಗಲಿದ್ದಾರೆ.ಯಾವ ಯಾವ ಕಡೆ ಬರಗಾಲವಿದೆಯೋ ಅಂತಹ ಕಡೆ ಪ್ರವಾಸ ನಡೆಸಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಶಾಸಕರಿಗೆ ಸೂಚಿಸುವುದಾಗಿ ಹೇಳಿದರು.

ಈಗಾಗಲೇ ಬಹುತೇಕ ಶಾಸಕರು ಗುರುಗ್ರಾಮದಿಂದ ಹೊರಟಿದ್ದಾರೆ.ಯಾರೊಬ್ಬರೂ ಬೆಂಗಳೂರಿನಲ್ಲಿ ಉಳಿಯದೆ ಕ್ಷೇತ್ರಗಳಿಗೆ ಮರಳಬೇಕೆಂದು ಸೂಚನೆ ಕೊಡಲಾಗಿದೆ.ಜವಾಬ್ದಾರಿಯುತ ಪ್ರತಿಪಕ್ಷವಾಗಿ ಏನು ಮಾಡಬೇಕೋ ನಾವು ಅದನ್ನು ಮಾಡುತ್ತಿದ್ದೇವೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪ್ರತಿಪಕ್ಷ ಮಾಡಲು ಮುಂದಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ