ಮೈತ್ರಿ ಸರ್ಕಾರದ ಜ್ವಾಲಾಮುಖಿ ಸ್ಪೋಟದ ಮುನ್ಸೂಚನೆ ಯಡಿಯೂರಪ್ಪ

ಬೆಂಗಳೂರು, ಜ.19-ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‍ಪಿ) ಸಭೆಗೆ ಕೆಲವು ಶಾಸಕರು ಗೈರಾಗಿದ್ದು, ಆಡಳಿತರೂಢ ಮಿತ್ರಪಕ್ಷಗಳ ನಡುವೆ ಭಿನ್ನಾಭಿಪ್ರಾಯ ತೀವ್ರಗೊಂಡಿದೆ. ಇದು ಮುಂಬರುವ ದಿನಗಳಲ್ಲಿ ದೋಸ್ತಿ ಸರ್ಕಾರದಲ್ಲಿ ಜ್ವಾಲಾಮುಖಿ ಸ್ಫೋಟದ ಮುನ್ಸೂಚನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಿನ್ನೆ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್‍ಪಿ ಸಭೆಯಲ್ಲಿ ಭಾಗವಹಿಸದಿರುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಕಾಂಗ್ರೆಸ್ ವರಿಷ್ಠರು ನೀಡಿದ್ದ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಪಕ್ಷದ ಶಾಸಕರು ಸಭೆಗೆ ಕೈಕೊಟ್ಟಿದ್ದಾರೆ.ಶಾಸಕರ ಗೈರು ಕಾಂಗ್ರೆಸ್ ಶಾಸಕರಿಗೆ ಪಕ್ಷದ ಬಗ್ಗೆ ಇರುವ ತೀವ್ರ ಅಸಮಾಧಾನ ಮತ್ತು ಕೋಪವನ್ನು ಬಹಿರಂಗಗೊಳಿಸಿದೆ ಎಂದುಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಪಕ್ಷದ ಶಾಸಕರೊಂದಿಗೆ ನಿಮ್ಮ(ಸಿದ್ದರಾಮಯ್ಯ) ಸೌಹಾರ್ದ ಸಂಬಂಧ ಚೆನ್ನಾಗಿದ್ದರೆ ಅವರಿಗೆ ನೀವು ನೋಟಿಸ್‍ನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುವ ಅಗತ್ಯವೇನಿತ್ತು ಎಂದು ಬಿಎಸ್‍ವೈ ಪ್ರಶ್ನಿಸಿದರು.

ಕಾಂಗ್ರೆಸ್ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನೂ ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ.2008ರಲ್ಲೇ ಬಿಜೆಪಿ ಆಪರೇಷನ್ ಕಮಲ ಆರಂಭಿಸಿದೆ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ