ಬೆಂಗಳೂರು, ಜ.18-ಬಳ್ಳಾರಿ ಜಿಲ್ಲಾ ಕಾಂಗ್ರೆಸ್‍ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್‍ಪ್ಲಾಂಟ್(ಅಸ್ಥಿಮಜ್ಜೆ) ಘಟಕದ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಅವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರಿಗೂ ಕೂಡ ಉನ್ನತ ಹುದ್ದೆ ನೀಡಲಾಗುತ್ತದೆ. ಅವರು ವೈಯಕ್ತಿಕ ಕೆಲಸಕ್ಕೆ ಮುಂಬೈಗೆ ಹೋಗಿದ್ದಾರಷ್ಟೇ. ಈಗ ಯಾರೂ ಕೂಡ ರೆಸಾರ್ಟ್‍ನಲ್ಲಿ ಇಲ್ಲ. ಎಲ್ಲರೂ ವಾಪಸ್ ಬಂದಿದ್ದಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಟ್ಟಾಗಿ ಎದುರಿಸುತ್ತೇವೆ. ಅಲ್ಲದೆ ಗರಿಷ್ಠ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಲ್ಲರೂ ಶಾಸಕರು ಆಗಮಿಸುತ್ತಾರೆ.ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಹೈಕಮಾಂಡ್ ಹೇಳಿದಂತೆ ನಾವು ಕೆಲಸ ಮಾಡುತ್ತೇವೆ. ಶಾಸಕ ನಾಗೇಂದ್ರ ಸೇರಿದಂತೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಸಭೆಗೆ ಆಗಮಿಸುತ್ತಾರೆ.ಅದರಲ್ಲಿ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.






