ಬೆಂಗಳೂರು, ಜ.18- ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲು ಎಲ್ಲರ ನಿರೀಕ್ಷೆ ಮೀರಿ ನಾನು ಕೆಲಸ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆದ್ದು ರಾಹುಲ್‍ಗಾಂಧಿ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ಎಲ್ಲರೂ ಮಾಡಬೇಕು ಎಂದು ನೂತನ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕೆಲವರು ಭಾರತವನ್ನು ಮುಕ್ತಗೊಳಿಸುವುದಾಗಿ ಹೇಳಿಕೊಂಡು ತಾವೇ ಇಲ್ಲವಾಗುತ್ತಿದ್ದಾರೆ.60 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ ಮಾತನಾಡುವ ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್. ಒಂದು ಕಾಲದಲ್ಲಿ ಸೂಜಿ ತಯಾರು ಮಾಡಲು ಸಾಧ್ಯವಿಲ್ಲದಿದ್ದ ಕಾಲದಲ್ಲಿ ಇಂದು ವಿಮಾನ ತಯಾರು ಮಾಡುತ್ತಿದ್ದೇವೆ.ಆಹಾರ ಸ್ವಾವಲಂಬನೆ ಸಾಧಿಸಿದ್ದೇವೆ ಎಂದು ಹೇಳಿದರು.
1991ರಲ್ಲಿ 18ಕೋಟಿ ಮಧ್ಯಮ ವರ್ಗದವರಿದ್ದರು, ಈಗ ಅದು 44ಕೋಟಿಗೇರಿದೆ.ಐಐಟಿ, ಐಐಎಂನಂತಹ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡಿವೆ. ಕಾಂಗ್ರೆಸ್ ಸಾಧನೆ ಪ್ರಶ್ನಿಸುವ ಮೋದಿ ನಾಲ್ಕೂವರೆ ವರ್ಷದಲ್ಲಿ ಈವರೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಅವರು ಈವರೆಗೂ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 78 ಕೋಟಿ ಉದ್ಯೋಗ ಸೃಷ್ಟಿಸಿತ್ತು.ದೇಶದಲ್ಲಿ 40.79 ಕೋಟಿ ಉದ್ಯೋಗಗಳಿದ್ದವು ಅದನ್ನು ಇನ್ನಷ್ಟು ಹೆಚ್ಚಿಸಬೇಕಾದ ಮೋದಿ ಅವರು ತಮ್ಮ ದುರಾಡಳಿತದಿಂದ 1.78 ಕೋಟಿ ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪ್ರತಿಯೊಂದು ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದೆ.ಸರ್ಜಿಕಲ್ ಸ್ಟ್ರೈಕ್‍ನಂತಹ ವಿಚಾರಗಳನ್ನೂ ಕೂಡ ಬಿಜೆಪಿ ರಾಜಕಾರಣಕ್ಕೆ ಬಳಸಿಕೊಂಡಿದೆ. ಇಂತಹ ಹಲವಾರು ಸರ್ಜಿಕಲ್ ಸ್ಟ್ರೈಕನ್ನು ಕಾಂಗ್ರೆಸ್ ಮಾಡಿದ್ದರೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.