ನಷ್ಟದಲ್ಲಿರುವ ಕಂಪನಿಗಳನ್ನು ಮತ್ತೆ ಲಾಭದಾಯಕವಾಗುವಂತೆ ಮಾಡಬೇಕು

ಬೆಂಗಳೂರು, ಜ.18- ನಗರದ ಕೆಇಬಿ ಇಂಜಿನಿಯರ್ ಸಂಘದ ಸಭಾಂಗಣದಲ್ಲಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ 2019 ರ ತಾಂತ್ರಿಕ ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕಲ್ಲಿದ್ದಲಿನ ಕೊರತೆ, ಕೆಲವೊಮ್ಮೆ ನೀರಿನ ಅಭಾವ ಇಂತಹ ಹಲವಾರು ಸಮಸ್ಯೆಗಳ ಮಧ್ಯೆಯೂ ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಬೇರೆ ರಾಜ್ಯಗಳಿಗಿಂತ ಉತ್ತಮ ರೀತಿಯಲ್ಲಿ ನಾವು ಸೇವೆ ನೀಡುತ್ತಿದ್ದೇವೆ. ಆದರೆ, ಇಲಾಖೆಗೆ ಇನ್ನಷ್ಟು ಸೌಕರ್ಯಗಳನ್ನು ನೀಡಿದಲ್ಲಿ ಇನ್ನೂ ಹೆಚ್ಚಿನ ರೀತಿಯ ಸೇವೆ ನೀಡಲು ಸಾಧ್ಯವಿದೆ.ಈ ಹಿನ್ನಲೆಯಲ್ಲಿ ಇಲಾಖೆಗೆ ಬೇಕಾದ ಸೌಕರ್ಯಗಳನ್ನು ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಪಿಂಚಣಿ ಸೇರಿದಂತೆ ಇಂಜನಿಯರ್‍ಗಳ ಸಂಘ ಮಾಡಿರುವ ಬೇಡಿಕೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದೇನೆ ಎಂದು ಇದೇ ವೇಳೆ ಭರವಸೆ ನೀಡಿದರು.

2014ರಲ್ಲಿ ರಾಜ್ಯದಲ್ಲಿ ಸರ್‍ಪ್ಲಸ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿತ್ತು.ಆದರೆ, ಇದುವರೆಗೂ ಹಲವಾರು ಕಾರಣಗಳಿಂದ ಇದು ಸಾಧ್ಯವಾಗಿಲ್ಲ. ಅಲ್ಲದೆ, ರಾಜ್ಯದ ಬಹಳಷ್ಟು ವಿದ್ಯುತ್ ಕಂಪನಿಗಳ ನಷ್ಟದಲ್ಲಿವೆ. ಇವುಗಳನ್ನು ಮತ್ತೆ ಲಾಭದತ್ತ ಮುಖ ಮಾಡುವಂತಹ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.

ಕೆಇಬಿ ಇಂಜಿನೀಯರುಗಳ ಸಂಘದ ಅಧ್ಯಕ್ಷ ಎ.ಎನ್.ಜಯರಾಜ್ ಇಂಜಿನೀರುಗಳಿಗೆ ಬಡ್ತಿ, ಪಿಂಚಣಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿದರು.
ಇಂಧನ ಇಲಾಖೆ ಕಾರ್ಯದರ್ಶಿ ಪಿ.ರವಿಕುಮಾರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಸೆಲ್ವಕುಮಾರ್, ಕೆಪಿಟಿಸಿಎಲ್ ನಿರ್ದೇಶಕ ಕೆ.ವಿ.ಶಿವಕುಮಾರ್, ಡ್ರೋನ್ ವಿಜ್ಞಾನಿ ಎನ್.ಎಂ. ಪ್ರತಾಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ