ಬೆಂಗಳೂರು,ಜ.18- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯಲ್ಲಿ ಕಾನೂನು ಮತ್ತು ಮಾಪನ ಇಲಾಖೆ ಜಾರಿಗೊಳಿಸಿದ್ದ ಹಿಂದಿನ ಅಧಿಸೂಚನೆಯನ್ನು ಹಿಂಪಡೆದು ನೂತನ ಅಧಿಸೂಚನೆಯನ್ನು ಜಾರಿಗೆ ತರಲಾಗಿದೆ.
ನೂತನ ಅಧಿಸೂಚನೆಯ ಪ್ರಕಾರ ಇಲಾಖೆಯಲ್ಲಿನ ಪರಿಶೀಲನೆ, ಕೇಸು ದಾಖಲು ಹಾಗೂ ದಂಡ ವಸೂಲಾತಿಯಂತಹ ಚಟುವಟಿಕೆಗಳು ಗ್ರಾಹಕ ಸ್ನೇಹಿ ಯಾಗಿರುವಂತೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಲಾಗಿದೆ.
ಇಲಾಖೆಯಲ್ಲಿನ ಅಧಿಕಾರಿಗಳಿಗೆ ನೂತನವಾಗಿ ತಮ್ಮ ತಮ್ಮ ವ್ಯಾಪ್ತಿಯನ್ನು ನಿಗದಿಗೊಳಿಸಿ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ .ಜಿಎಸ್ಟಿ ಜಾರಿಯಾದ ನಂತರ ಗ್ರಾಹಕರ ರಕ್ಷಣೆ ಹಾಗೂ ಹಿತವನ್ನು ಕಾಪಾಡುವ ದೃಷ್ಟಿಯಲ್ಲಿ ಈ ನೂತನ ಅಧಿಸೂಚನೆ ಹೆಚ್ಚಿನ ಜವಾಬ್ದಾರಿ ಹೊಂದಿದೆ.
ಜಮೀರ್ ಅಹಮ್ಮದ್ ಅವರು ಆಹಾರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಹಿಂದೆ ಜಾರಿಯಲ್ಲಿದ್ದ ಅಧಿಸೂಚನೆಯಿಂದ ಆಗುತ್ತಿದ್ದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಹೊಸ ಅಧಿಸೂಚನೆ ಜಾರಿಗೆ ಅನುಮತಿ ನೀಡಿದ್ದಾರೆ.
ಜಿಎಸ್ಟಿ ತೆರಿಗೆಯನ್ನು ಕಾಲಾವಧಿಯಲ್ಲಿ ಪರಿಷ್ಕರಣೆಗೊಳಿಸಲು, ಗ್ರಾಹಕರ ಸಮಸ್ಯೆಗಳು, ನಗರ, ಗಡಿ ನಗರಗಳ ವಿಸ್ತರಿಸಿ ಹಾಗೂ ಸರಕಾರಕ್ಕೆ ಆದಾಯವನ್ನು ಹೆಚ್ಚಿಸುವಲ್ಲಿ ಹೊಸ ಅಧಿಸೂಚನೆ ಯಶಸ್ವಿಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಯದರ್ಶಿಗಳಾದ ಎಂ .ವಿ . ಸಾವಿತ್ರಿರವರು ತಾವು ಕಾರ್ಯ ನಿರ್ವಹಿಸಿದ ಎಲ್ಲ ಇಲಾಖೆಗಳಲ್ಲಿಯೂ ತಮ್ಮ ಕಾರ್ಯಕ್ರಮಗಳಿಂದಾಗಿ ಅನೇಕ ಉತ್ತಮ ನೀತಿ ಹಾಗೂ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಗಮನಾರ್ಹ ಎಂದು ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ ,ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಯ್ಯ ಹಾಗೂ ಕಾರ್ಯದರ್ಶಿ ಎಂ ಎಸ್ ಕುಮಾರ್ ಅವರು ಶ್ಲಾಘಿಸಿದ್ದಾರೆ.