ಬೆಂಗಳೂರು, ಜ.18-ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ವಿಶೇಷ ಶಾಸಕಾಂಗ ಪಕ್ಷದ ಸಭೆಗೆ ಬಹುತೇಕ ಅತೃಪ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕಾಂಗ್ರೆಸ್ ವಿರುದ್ಧ ಸೆಡ್ಡುಹೊಡೆದು ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈ ಸೇರಿದ್ದ ಅನೇಕ ಕೈ ಶಾಸಕರು ರಾಜಧಾನಿ ಬೆಂಗಳೂರಿಗೆ ಹಿಂದಿರುಗಿದ್ದು, ಇಂದಿನ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್ಗೌಡ, ಮಹೇಶ್ ಕುಮಟಳ್ಳಿ ಹಾಜರಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ನಿನ್ನೆಯಷ್ಟೆ ಶಿವರಾಂ ಹೆಬ್ಬಾರ್, ಭೀಮಾನಾಯ್ಕ್ ಮುಂತಾದವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.ಅತೃಪ್ತ ಪಡೆಯ ಕೇಂದ್ರ ಬಿಂದುವಾಗಿದ್ದ ರಮೇಶ್ ಜಾರಕಿ ಹೊಳಿ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ.
ಅವರು ಇಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ, ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಮೇಶ್ ಜಾರಕಿ ಹೊಳಿ ಸಹೋದರ ಲಖನ್ ಜಾರಕಿ ಹೊಳಿ ಅವರೊಂದಿಗೆ ಮಾತುಕತೆ ನಡೆಸಿದ್ದು, ರಮೇಶ್ ಕೂಡ ಶಾಸಕಾಂಗ ಸಭೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್ನ ಎಲ್ಲರೂ ಸಭೆ ಹಾಜರಾಗುತ್ತಾರೆ.ಬರಲು ಸಾಧ್ಯವಾಗದವರು ಸಕಾರಣಗಳನ್ನು ಶಾಸಕಾಂಗ ಪಕ್ಷದ ಅಧ್ಯಕ್ಷರಿಗೆ ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ ವೇಳೆಗೆ ಏನಾಗುತ್ತದೆ ಎಂಬುದು ಕಾದು ನೋಡಬೇಕು.
ಅತ್ತ ಬಿಜೆಪಿಯವರು ಇನ್ನು ನಿರೀಕ್ಷೆ ಇಟ್ಟುಕೊಂಡು ತಮ್ಮ ಹೊಟೇಲ್ ವಾಸ್ತವ್ಯವನ್ನು ಮುಂದುವರೆಸಿದ್ದಾರೆ.ಸಿಎಲ್ಪಿ ಸಭೆ ಮುಗಿಯುವವರೆಗೆ ಗುರುಗ್ರಾಮದಿಂದ ಹಿಂತಿರುಗುವುದು ಬೇಡ ಎಂದು ನಿರ್ಧರಿಸಿ ಅಲ್ಲಿಯೇ ಇದ್ದಾರೆ.
ರಾಜಕೀಯ ಕ್ಲೈಮ್ಯಾಕ್ಸ್ ಏನಾಗಲಿದೆ ಎಂಬುದು ಇಂದು ಸಂಜೆ ತಿಳಿಯಲಿದೆ.