ನವದೆಹಲಿ: ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿದ ಬೆನ್ನಲ್ಲೇ ಕೇಂದ್ರ ಸರಕಾರವು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನೂ ವಜಾಗೊಳಿಸಿದೆ. ಸಿಬಿಐನೊಳಗೆ ಅಲೋಕ್ ವರ್ಮಾ ಜೊತೆ ಜಟಾಪಟಿಗಿಳಿದಿದ್ದ ರಾಕೇಶ್ ಅಸ್ತಾನ ಅವರನ್ನು ತತ್ಕ್ಷಣಕ್ಕೆ ಜಾರಿಯಾಗುವಂತೆ ನಾಗರಿಕ ವಿಮಾನಯಾನ ಇಲಾಖೆಗೆ ವರ್ಗಾವಣೆ ಮಾಡಿ ಕೇಂದ್ರ ಆದೇಶ ಹೊರಡಿಸಿದೆ. ಅಸ್ತಾನ ಅವರ ಆಪ್ತರಾದ ಎ.ಕೆ. ಶರ್ಮಾ, ಎಂಕೆ ಸಿನ್ಹಾ ಹಾಗೂ ಜಯಂತ್ ನಾಯಕ್ನವರೆ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಕೇಂದ್ರ ವಿಚಕ್ಷಣ ಆಯೋಗದ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎ.ಕೆ. ಶರ್ಮಾ ಅವರನ್ನು ಸಿಆರ್ಪಿಎಫ್ನ ಎಡಿಜಿಯಾಗಿ ವರ್ಗ ಮಾಡಲಾಗಿದೆ. ಇನ್ನು, ಎಂ.ಕೆ. ಸಿನ್ಹಾ ಅವರನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋಗೆ ಟ್ರಾನ್ಸ್ಫರ್ ಮಾಡಲಾಗಿದೆ.
ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನ ಅವರಿಬ್ಬರ ಮೇಲೂ ಭ್ರಷ್ಟಾಚಾರ ಆರೋಪಗಳಿವೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸಿದ್ದು, ಅವರಿಬ್ಬರ ಜಗಳ ತಾರಕಕ್ಕೇರಿತ್ತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ಸರಕಾರವು ಅಕ್ಟೋಬರ್ 23ರಂದು ಇಬ್ಬರನ್ನೂ ಕಡ್ಡಾಯ ರಜೆಯ ಮೇಲೆ ಕಳುಹಿಸಿ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ಅವರನ್ನು ತಂದು ಕೂರಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅಲೋಕ್ ವರ್ಮಾ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾದರೂ ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿಯಿಂದ ಪದಚ್ಯುತಗೊಂಡಿದ್ದರು. ಅವರನ್ನು ಅಗ್ನಿಶಾಮಕ ದಳಕ್ಕೆ ವರ್ಗಾವಣೆ ಮಾಡಲಾಯಿತಾದರೂ ಅದನ್ನನವರು ತಿರಸ್ಕರಿಸಿದರು. ಈ ತಿಂಗಳು ಅಲೋಕ್ ವರ್ಮಾ ಅವರ ಅಧಿಕಾರಾವಧಿ ಅಂತ್ಯಗೊಳ್ಳುತ್ತದೆ.
ಅಲೋಕ್ ವರ್ಮಾ ಅವರನ್ನು ವಜಾಗೊಳಿಸುವ ಕೇಂದ್ರ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ರಾಕೇಶ್ ಅಸ್ತಾನ ಅವರನ್ನು ವರ್ಗಾವಣೆ ಮಾಡಲು ಈ ಒಂದು ಒತ್ತಡವೂ ಕಾರಣವಾಗಿರುವ ಸಾಧ್ಯತೆ ಇದೆ.
ಇದೇ ವೇಳೆ, ಎಂ. ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ಸಿಬಿಐ ನಿರ್ದೇಶಕರನ್ನಾಗಿ ಮಾಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರ ಜೊತೆಗೆ, ಜನವರಿ 24ರಂದು ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯೊಂದು ನೂತನ ಸಿಬಿಐ ನಿರ್ದೇಶಕರ ನೇಮಕಕ್ಕಾಗಿ ಸಭೆ ನಡೆಸಲಿದೆ. ಇದಕ್ಕೆ ಮುನ್ನ ರಾಕೇಶ್ ಅಸ್ತಾನ ಸೇರಿದಂತೆ ನಾಲ್ವರನ್ನು ಸಿಬಿಐನಿಂದ ವರ್ಗಾವಣೆ ಮಾಡಿರುವುದು ಗಮನಾರ್ಹವಾಗಿದೆ.