ಬೆಂಗಳೂರು,ಜ.18- ದೂರದ ಗುರುಗ್ರಾಮದ ರೆಸಾರ್ಟ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ವಿಶ್ರಾಂತಿ ಪಡೆಯುತ್ತಿರುವ ಬಿಜೆಪಿ ಶಾಸಕರು ಈಗಲಾದರೂ ಜನರ ಬಳಿ ಬಂದು ಅವರ ಕಷ್ಟಸುಖಗಳನ್ನು ಆಲಿಸಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯಭರಿತವಾಗಿ ಟಾಂಗ್ ಕೊಟ್ಟಿದ್ದಾರೆ.
ಅಯ್ಯೋ ಪಾಪ..ಅವರ ಶಾಸಕರು ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಇಂದು ವಾಪಸ್ ಬರಬೇಕಿತ್ತು.ಯಾವ ಕಾರಣಕ್ಕಾಗಿ ಬಂದಿಲ್ಲ ಎಂಬುದು ನನಗೂ ತಿಳಿದಿಲ್ಲ. ಕಡೇ ಪಕ್ಷ ನಾಳೆಯಾದರೂ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಇನ್ನು ಮುಂದಾದರೂ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಕೇಳಲಿ ಎಂದು ಟೀಕಿಸಿದರು.
ಲಾಲ್‍ಬಾಗ್‍ನ ಗಾಜಿನಮನೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಸಕರು ರೆಸಾರ್ಟ್‍ನಿಂದ ಬರಬಹುದೆಂದು ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರೇ ಹೇಳಿದ್ದಾರೆ. ಈಗಲಾದರೂ ಬರುವ ಮನಸ್ಸು ಮಾಡಿರುವುದು ಸಂತೋಷ ಎಂದು ಕುಹಕವಾಡಿದರು.
ಇದಕ್ಕೂ ಮುನ್ನ ವಿಶ್ವವಿಖ್ಯಾತ 2019ನೇ ಸಾಲಿನ ಫಲಪುಷ್ಪ ಪ್ರದರ್ಶನಕ್ಕೆ ಪಾರಿವಾಳ ಹಾರಿಸುವ ಮೂಲಕ ಚಾಲನೆ ನೀಡಿದ ಕುಮಾರಸ್ವಾಮಿ ಅವರು, ಗಣರಾಜ್ಯೋತ್ಸವ ಮತ್ತು ಸ್ವತಂತ್ರ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷ ಫಲಪುಷ್ಪ ಪ್ರದರ್ಶನ ಏರ್ಪಡಿಸುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಫಲಪುಷ್ಪ ಪ್ರದರ್ಶನ ಸುಮಾರು ಒಂದು ಶತಮಾನದಿಂದ ನಡೆದುಕೊಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಇದು ದೇಶದಲ್ಲೇ ಅತ್ಯಂತ ವಿಶಿಷ್ಟವಾಗಿ ಮತ್ತು ಆಕರ್ಷಣೀಯವಾಗಿ ನಡೆದುಕೊಂಡು ಬಂದಿರುವುದಕ್ಕೆ ನಾನು ಇಲ್ಲಿನ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.