
ಬೆಂಗಳೂರು,ಜ.17-ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಅತ್ತ ವಿಪಕ್ಷದವರೂ ಕೂಡ ತಮ್ಮದೇ ಆಟ ಆಡುತ್ತಿದ್ದಾರೆ.ಇತ್ತ ರೈತರ ಸಂಕಷ್ಟಗಳನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಸರ್ಕಾರ ಸತ್ತಿದೆಯೋ, ಬದುಕಿದೆಯೋ ಗೊತ್ತಿಲ್ಲ. ಬರಗಾಲದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇನ್ನು ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಕಟಾವು ಮಾಡಿರುವ ಭತ್ತವನ್ನು ಮಾರಾಟ ಮಾಡಲು ಮಾರುಕಟ್ಟೆಗಳಲ್ಲಿ ಕಾಯುತ್ತಾ ಕುಳಿತಿದ್ದಾರೆ. ಕಬ್ಬು ಬೆಳೆಗಾರರಿಗೂ ಕಳೆದ ಸಾಲಿನ ಬರಬೇಕಾದ 600 ಕೋಟಿ ಸೇರಿದಂತೆ ಈವರೆಗೆ ನೀಡಿರುವ ಕಬ್ಬಿಗೆ ಕಾರ್ಖಾನೆಯವರು ಒಂದು ರೂ. ಕೂಡ ನೀಡುತ್ತಿಲ್ಲ.ಈಗಿರುವಾಗ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಭತ್ತ ಖರೀದಿ ಕೇಂದ್ರವನ್ನು ತೆರೆಯುವುದಾಗಿ ಆಶ್ವಾಸನೆ ನೀಡಿದ ಸರ್ಕಾರ ಈವರೆಗೂ ಈ ಬಗ್ಗೆ ಚಕಾರವೆತ್ತಿಲ್ಲ. ಇದನ್ನು ಪ್ರಶ್ನಿಸಿ ಹೋರಾಟ ಮಾಡಬೇಕಾಗಿದ್ದ ವಿಪಕ್ಷ ಬಿಜೆಪಿ ಕೂಡ ತನ್ನದೇ ಸ್ವಹಿತಕ್ಕಾಗಿ ಜನರನ್ನು ಮರೆತು ಐಷರಾಮಿ ಹೋಟೆಲ್ನಲ್ಲಿ ತಂಗಿದ್ದಾರೆ. ಇವರ ವಿರುದ್ಧ ರೈತ ಸಮುದಾಯ ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪರಿಷತ್ ಸಭೆಯಲ್ಲಿ ಇಂದು ಸರ್ಕಾರಕ್ಕೆ ಕರ ಬಂದ್ ಚಳುವಳಿ, ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ವಾಪಸ್ ಪಡೆಯುವುದು ಸೇರಿದಂತೆ ಉಗ್ರ ಹೋರಾಟದ ಕುರಿತು ತೀರ್ಮಾನವಾಗಿದೆ. ಸರ್ಕಾರ ಹಾಗೂ ವಿಪಕ್ಷಗಳು ತಮ್ಮ ನಾಟಕಗಳನ್ನು ನಿಲ್ಲಿಸಿ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ತಿಳಿಸಿದ್ದಾರೆ.