ಬೆಂಗಳೂರು,ಜ.17- ಪಾರ್ಕಿನ್ಸನ್ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದೇ 18ರಿಂದ ನಗರದಿಂದ ಕಠ್ಮಂಡುವಿಗೆ 40 ದಿನಗಳ ಕಾಲ 2600 ಕಿ.ಮೀ ಪ್ರವಾಸದ ಜೊತೆಗೆ ವಿಚಾರ ಸಂಕಿರಣವನ್ನು ಹರಿಪ್ರಸಾದ್ ನಡೆಸಲಿದ್ದಾರೆ ಎಂದು ಕೊಲಂಬಿಯಾ ಏಷ್ಯಾದ ನರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ.ಗುರುಪ್ರಸಾದ್ ಹೊಸೂರ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 10 ವರ್ಷಗಳ ಹಿಂದೆ ಹರಿಪ್ರಸಾದ್ ಅವರು ಈ ಕಾಯಿಲೆಗೆ ತುತ್ತಾಗಿ ಎಡಗೈಯಲ್ಲಿ ನಡುಕ ಜೊತೆಗೆ ದೇಹದ ಎಡಭಾಗದ ಚಲನೆಯಲ್ಲಿ ನಿಧಾನಗತಿ ಕಂಡುಬಂದಿತ್ತು.ಕೂಡಲೇ ಅವರು ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈಗ ಅವರು ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದರು.
ಈ ಕಾಯಿಲೆಯ ನಿರ್ವಹಣೆ ಮತ್ತು ಜಾಗೃತಿ ಮೂಡಿಸಲು ನಾವು ವೇದಿಕೆ ಒದಗಿಸಿದ್ದು, ಅದರನ್ವಯ ಹರಿಪ್ರಸಾದ್ ದೇಶದ ಜನರಲ್ಲಿ ಈ ಕಾಯಿಲೆ ಬಗ್ಗೆ ಅರಿವು ಮೂಡಿಸಲು ಇದೇ 18ರಂದು ಪ್ರಯಾಣವನ್ನು ಆರಂಭಿಸಿ ಬೆಳಗಾವಿ, ಕೋಲಾಡ್, ನಾಸಿಕ್, ಸರ್ದಾರ್ ಸರೋವರ, ಇಂದೋರ್, ಭೂಪಾಲ್, ಸಾಂಚಿ, ಝಾನ್ಸಿ, ಆಗ್ರ, ಲಖ್ನೌ, ಗೋರಕ್‍ಪುರ, ಲುಂಬಿನಿ, ಸೇರಿದಂತೆ 12 ನಗರಗಳಲ್ಲಿ ಮೂಲಕ ಸವಾರಿ ಮಾಡಿ ಫೆ.6ರಂದು ಕಠ್ಮಂಡುವಿಗೆ ತಲುಪಲಿದ್ದಾರೆ ಎಂದು ಹೇಳಿದರು.