ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪಿ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಗುರಿಯಾಗಿರಿಸಿಕೊಂಡು ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಿತ್ತು. ಆದರೆ, ಬಿಜೆಪಿ ನಾಯಕರ ಈ ತಂತ್ರವನ್ನು ವಿಫಲ ಮಾಡಲು ಪ್ರತಿತಂತ್ರ ರೂಪಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ.
ದೂರದ ಮುಂಬೈ ಸೇರಿದಂತೆ ಅನೇಕ ಕಡೆ ಇದ್ದ ಕಾಂಗ್ರೆಸ್ ಅತೃಪ್ತರು ನಾಯಕರ ಸಂಪರ್ಕಕ್ಕೆ ಸಿಗದೆ ಇನ್ನೇನು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಈ ವೇಳೆ ತಮ್ಮ ಶಾಸಕರನ್ನು ರಾಜಧಾನಿಗೆ ಕರೆಸಿಕೊಳ್ಳಲು ಸಿದ್ದರಾಮಯ್ಯ ಮಾಡಿದ ಉಪಾಯ ಎಂದರೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯುವುದು.
ತಮ್ಮ ಎಲ್ಲ ಶಾಸಕರು ಜ.18ರಂದು ವಿಧಾನಸೌಧದಲ್ಲಿ 3.30ಕ್ಕೆ ಹಾಜರಾಗಬೇಕು. ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲಾಗುವುದು ಎಂದು ಖಡಕ್ ಸೂಚನೆ ಹೊರಡಿಸಿದರು. ಒಂದು ವೇಳೆ ಶಾಸಕರು ಹಾಜರಾಗದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ವ ಇಚ್ಛೆಯಿಂದ ಅವರು ತಮ್ಮ ಸದಸ್ಯ ಸ್ಥಾನ ಬಿಟ್ಟುಕೊಟ್ಟಂತೆ ಎಂದು ಹೇಳಿದ್ದಾರೆ.
ಅಲ್ಲದೇ ತಮ್ಮ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಒಂದು ಕರೆಗೆ ಬೆದರಿದ ರೆಬೆಲ್ ಶಾಸಕರು ಒಬ್ಬೊಬ್ಬರಾಗಿ ರಾಜಧಾನಿಯತ್ತ ಮರಳುತ್ತಿದ್ದಾರೆ. ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ ಹೊರತುಪಡಿಸಿ ಬಹುತೇಕ ಅತೃಪ್ತ ಶಾಸಕರು ಬೆಂಗಳೂರಿನತ್ತ ಆಗಮಿಸಿದ್ದಾರೆ.
ಇನ್ನು ಆಪರೇಷನ್ ಕಮಲ ವಿಫಲದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರ ಈ ಯತ್ನ ವಿಫಲವಾಗುತ್ತದೆ ಎಂಬುದು ಗೊತ್ತಿತ್ತು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದರೆ ಹೀಗೆ ಆಗುತ್ತದೆ. 2008ರಲ್ಲಿ ಆಪರೇಷನ್ ಕಮಲ ಶುರುಮಾಡಿದ್ದೆ ಬಿಜೆಪಿಯವರು. ಅವರದೇ ಯೋಜನೆ ಈಗ ಅವರಿಗೆ ಮುಳುವಾಗಿದೆ ಎಂದು ವಾಗ್ದಾಳಿ ನಡೆಸಿದರು.