
ಬೆಂಗಳೂರು, ಜ.17- ಅಕ್ರಮ ಅದಿರು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಆನಂದ್‍ಸಿಂಗ್, ಬಿ.ನಾಗೇಂದ್ರ ಅವರು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾದರು.
ಬೇಲೇಕೇರಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣದ ಆರೋಪ ಎದುರಿಸುತ್ತಿರುವ ಇವರು ಪ್ರತಿವಾರ ನಡೆಯುವ ವಿಚಾರಣೆಗೆ ಹಾಜರಾಗಬೇಕಾಗಿದೆ.ಆ ಹಿನ್ನೆಲೆಯಲ್ಲಿ ಇಬ್ಬರೂ ಶಾಸಕರು ಇಂದು ವಿಚಾರಣೆಗೆ ಹಾಜರಾದರು.
ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಶಾಸಕ ಬಿ.ನಾಗೇಂದ್ರ ಅವರು ಮುಂಬೈನಲ್ಲಿದ್ದಾರೆ ಎಂದು ಹೇಳಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಇಂದು ಅವರು ಬೆಂಗಳೂರಿನ ವಿಶೇಷ ನ್ಯಾಯಾಲಯದ ಎದುರು ಹಾಜರಾದರು.
ಮುಂಬೈನ ರೀ ಸೆಸಾನ್ಸ್ ಹೊಟೇಲ್‍ನಲ್ಲಿದ್ದಾರೆನ್ನಲಾದ ನಾಗೇಂದ್ರ ಅವರು ಇಂದು ಬೆಂಗಳೂರಿನಲ್ಲಿರುವ ನ್ಯಾಯಾಲಯಕ್ಕೆ ಹಾಜರಾಗಿ ಆಶ್ಚರ್ಯ ಮೂಡಿಸಿದರು.
ನಾಗೇಂದ್ರ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಲಿದ್ದಾರೆ ಎಂದು ಹೇಳಲಾಗಿತ್ತು.ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇಂದು ಬೆಂಗಳೂರಿನಲ್ಲಿ ದಿಢೀರ್ ಪ್ರತ್ಯಕ್ಷವಾದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ.