ಬೆಂಗಳೂರು, ಜ.17- ಸಂಗೀತ ಪ್ರೇಮಿಗಳಿಗೆ ರಸದೌತನ ಉಣಬಡಿಸುವ ಎಂ ಫೆಸ್ಟ್-2019 ಕಾರ್ಯಕ್ರಮವನ್ನು ನಾಳೆಯಿಂದ ಮೂರು ದಿನಗಳ ಕಾಲ ರಾಜಾಜಿನಗರದ ಒರಾಯನ್‍ಮಾಲ್‍ನ ಲೇಕ್‍ಸೈಡ್‍ನಲ್ಲಿ ಆಯೋಜಿಸಲಾಗಿದೆ ಎಂದು ಟಾರಿಯನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ನಾಳೆ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ಶನಿವಾರ ಮಧ್ಯಾಹ್ನ 11 ಗಂಟೆಗೆ ಭಾರತೀಯ ಜಾನಪದ ಸಂಗೀತ, 12 ಗಂಟೆಗೆ ಪಬ್ಲಿಕ್ ಡ್ರಮ್ ಸರ್ಕಲ್, ಸಂಜೆ 4.30ಕ್ಕೆ ಜೂಕ್ ರೇಡಿಯೊ ಸಂಜೆ 6 ಗಂಟೆಗೆ ಬ್ಯಾಂಡ್ ಬಾಲಲೀಲಾದ ಬಾಲಭಾಸ್ಕರ್ ಅವರಿಗೆ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಭಾನುವಾರ ಬೆಳಗ್ಗೆ 10ಗಂಟೆಗೆ ಎನ್.ಎಸ್.ಮಂಜುನಾಥ್ ಮತ್ತು ಸಂದೀಪ್ ವಶಿಷ್ಟ ಹಾಗೂ ಸಂಜೆ 4 ಗಂಟೆಗೆ ಚರಣ್‍ರಾವ್ ಮತ್ತು ಸಂಘರ್ಷಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 5 ಗಂಟೆ ಕನ್ನಡ ಇಂಟರ್‍ನ್ಯಾಷನಲ್ ಮ್ಯೂಸಿಕ್ ಅವಾರ್ಡ್ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜೀವಮಾನವ ಸಾಧನೆ ಪ್ರಶಸ್ತಿಯನ್ನು ನಾಡೋಜ ಬಿ.ಕೆ.ಸುಮಿತ್ರ, ಅಸಾಮಾನ್ಯ ಕೊಡುಗೆ ಪ್ರಶಸ್ತಿಯನ್ನು ಡಾ.ದೊಡ್ಡರಂಗೇಗೌಡ, ಅಂತಾರಾಷ್ಟ್ರೀಯ ಸಂಗೀತಗಾರ ಪ್ರಶಸ್ತಿಯನ್ನು ಪ್ರವೀಣ್‍ಗೊಡಕಿಂಡಿ, ಜನಪ್ರಿಯ ಗಾಯಕ ಪ್ರಶಸ್ತಿಯನ್ನು ವಿಜಯ್‍ಪ್ರಕಾಶ್ ಅವರಿಗೆ ನೀಡಲಾಗುವುದು ಎಂದು ಹೇಳಿದರು.
ಜತೆಗೆ ಚಲನಚಿತ್ರ ಸಂಗೀತ ಮನರಂಜನೆ, ಚಲನಚಿತ್ರೇತರ ಸಂಗೀತ, ಸಂಗೀತ ವಿಡಿಯೋ, ಡಿಜೆ ರಿಮ್ಯಾಕ್ಸ್ , ಕಲಾವಿದರು, ಕಿರುಚಿತ್ರ ಸಂಗೀತ ಮತ್ತು ತಾಂತ್ರಿಕ ವಿಭಾಗದಲ್ಲಿಯೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.