ಬೆಂಗಳೂರು,ಜ.17-ನಮ್ಮ ಪಕ್ಷದ ಶಾಸಕರು ಎಲ್ಲಿಗೆ ಹೋಗುತ್ತಾರೆ ಎಂಬುದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಅನಗತ್ಯ. ಒಳಬೇಗುದಿಯಿಂದ ಬಳಲುತ್ತಿರುವ ನಿಮ್ಮ ಮನೆಯನ್ನು ಮೊದಲು ಭದ್ರಪಡಿಸಿಕೊಳ್ಳಿ.ಬಿಜೆಪಿ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಕಾಂಗ್ರೇಸ್ ವಿರುದ್ಧ ಹರಿಹಾಯ್ದರು.
ಬಿಜೆಪಿ ಯಾವುದೇ ಶಾಸಕರನ್ನು ಸೆಳೆದು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಕಾಂಗ್ರೆಸ್ನ ಆಂತರಿಕ ಕಚ್ಚಾಟ ಹಾಗೂ ಮುಖ್ಯಮಂತ್ರಿಕುಮಾರಸ್ವಾಮಿ ಆಡಳಿತ ವೈಖರಿಯಿಂದ ಬೇಸತ್ತು ಕೆಲವರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿರಬಹುದು.ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಬಿಎಸ್ವೈ ಪ್ರಶ್ನಿಸಿದರು.
ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿಮ್ಮ ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದು ಟೀಕಾಪ್ರಹಾರ ನಡೆಸಿದರು.
ಲೋಕಸಭಾ ಚುನಾವಣೆ ಕುರಿತಂತೆ ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರನ್ನು ಒಂದು ಕಡೆ ಕರೆದುಕೊಂಡು ಹೋದರೆ ತಪ್ಪೇನು?ಸರ್ಕಾರದಲ್ಲಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಎಂದು ಅಪಪ್ರಚಾರ ಮಾಡುತ್ತಿದ್ದೀರಿ.ಮೊದಲು ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ಮುಖ್ಯಮಂತ್ರಿಗೆ ಗೊತ್ತಿಲ್ಲ.ಬಿಜೆಪಿ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕೆಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಎಲುಬಿಲ್ಲದ ನಾಲಿಗೆ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಯಡಿಯೂರಪ್ಪ , ಎಲುಬಿಲ್ಲದ ನಾಲಿಗೆ ಏನೂ ಬೇಕಾದರೂ ಮಾತನಾಡಬಹುದು. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಏನೇ ಆರೋಪ ಮಾಡಿದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಚಾಮುಂಡೇಶ್ವರಿಯಲ್ಲಿ ಇವರಿಗೆ ಜನತೆ ತಕ್ಕ ಪಾಠ ಕಲಿಸಿರುವುದನ್ನು ಸಹಿಸಿಕೊಳ್ಳದೆ ಮನಬಂದಂತೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ 30 ಸಾವಿರ ಮತಗಳ ಅಂತರದಿಂದ ಪರಾಭವಗೊಂಡವರು.ಇಂಥವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆಯೇ?ಎಂದು ಪ್ರಶ್ನಿಸಿದರು.
ಸರ್ಕಾರದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳಿಗೆ ಸಿದ್ದರಾಮಯ್ಯ ಸೂತ್ರಧಾರ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಒಣಪೌರುಷದ ಮಾತುಗಳನ್ನು ಆಡಿದರೆ ನಾಯಕರಾಗುವುದಿಲ್ಲ. ರಾಜ್ಯದಲ್ಲಿ ಅವರ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಗೌಡರು, ಪ್ರಜಾಪ್ರಭುತ್ವ, ತತ್ವ ಸಿದ್ಧಾಂತ, ಸಂವಿಧಾನದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಕುಹಕವಾಡಿದರು.
ಇವರ ಕುಟುಂಬಕ್ಕೆ ಅನುಕೂಲವಾಗುವುದಾದರೆ ವ್ಯವಸ್ಥೆ, ಸಂವಿಧಾನ, ಜಾತ್ಯತೀತ ಬಗ್ಗೆ ಮಾತನಾಡುತ್ತಾರೆ. ಆಪರೇಷನ್ ಕಮಲ ಬಿಜೆಪಿಯವರು ಮಾಡುತ್ತಾರೆ ಎಂದು ಗೌಡರು ಹೇಳುವಾಗ ಗುಜರಾತ್ನಿಂದ ಬೆಂಗಳೂರಿಗೆ ಶಾಸಕರನ್ನು ಕರೆತಂದಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾದ ವೇಳೆ ಅವರಿಗೆ ಯಾವ ರೀತಿ ಕಿರುಕುಳ ಕೊಟ್ಟಿದ್ದರು ಎಂಬುದು ಎಲ್ಲರಿಗೂ ಗೊತ್ತು.ಕರ್ನಾಟಕದಲ್ಲಿ ಇವರ ಕುಟುಂಬದಂತಹ ಸಮಯ ಸಾಧಕ ರಾಜಕಾರಣಿಗಳು ಮತ್ತೊಂದಿಲ್ಲ ಎಂದು ಹರಿಹಾಯ್ದರು.