ಬೆಂಗಳೂರು,ಜ.17- ಸಂಕ್ರಾಂತಿ ನಂತರ ಈ ಬಾರಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಹೊಸ ಸರ್ಕಾರವನ್ನು ರಚನೆ ಮಾಡೇ ಮಾಡುತ್ತೇವೆ ಎಂಬ ವಿಶ್ವಾಸ ಬಿಜೆಪಿಯಲ್ಲಿತ್ತು. ರಾಷ್ಟ್ರೀಯ ನಾಯಕರೇ ಈ ಬಾರಿ ಕಾರ್ಯಾಚರಣೆಗೆ ಇಳಿದಿರುವುದರಿಂದ ಯಾವ ಪ್ರಯತ್ನಗಳೂ ವಿಫಲವಾಗುವುದಿಲ್ಲ. ಸರ್ಕಾರ ರಚನೆ ಮಾಡುವ ಕನಸು ಈಡೇರುತ್ತದೆ ಎಂಬ ನಂಬಿಕೆ ಬಹುತೇಕ ಶಾಸಕರಲ್ಲಿತ್ತು.
ಕಾಂಗ್ರೆಸ್ನ ಭಿನ್ನಮತೀಯ ಶಾಸಕರಾದ ರಮೇಶ್ಜಾರಕಿಹೊಳಿ, ಬಿ.ನಾಗೇಂದ್ರ, ಆನಂದ್ ಸಿಂಗ್ ಸೇರಿದಂತೆ ಮತ್ತಿತರರು ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಯ ಶಾಸಕರನ್ನು ಕರೆತರುವುದಾಗಿ ವಾಗ್ದಾನ ಮಾಡಿದ್ದರು. ಹೀಗಾಗಿ ಕಳೆದೆರಡು ಬಾರಿ ವಿಫಲವಾಗಿದ್ದ ಆಪರೇಷನ್ ಕಮಲ ಈ ಬಾರಿ ಯಾವುದೇ ಕಾರಣಕ್ಕೂ ವಿಫಲವಾಗುವುದಿಲ್ಲ ಆಸೆ ಕೂಗಡಲಿದೆ ಎಂಬ ವಿಶ್ವಾಸ ಬಹುತೇಕರಲ್ಲಿತ್ತು.
ಆದರೆ ಯಾರನ್ನು ನಂಬಿಕೊಂಡು ಬಿಜೆಪಿ ಆಪರೇಷನ್ ಕಮಲ ಮಾಡಲು ಹೊರಟಿತ್ತೋ ಅದೇ ಶಾಸಕ-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್,ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಸೇರಿದಂತೆ ಮತ್ತಿತರ ಮುಖಂಡರ ಮುಂದೆ ಬಾಯ್ಬಿಡುತ್ತಿದ್ದಂತೆ ಇಡೀ ಕಾರ್ಯಾಚರಣೆಯ ರಹಸ್ಯ ಬಯಲಾಗಿತ್ತು.
ನಿನ್ನೆ ಮಧ್ಯಾಹ್ನದ ವೇಳೆಗೆ ರಹಸ್ಯ ಸ್ಥಳಕ್ಕೆ ತೆರಳಿದ್ದ ಇಬ್ಬರು ಭಿನ್ನಮತೀಯರು ಕಾಂಗ್ರೆಸ್ ತೆಕ್ಕೆಗೆ ಸೇರಿದ್ದು, ಇತರೆ ಶಾಸಕರು ಸಂಪರ್ಕಕ್ಕೆ ಬಂದಿದ್ದು ಎಲ್ಲ ಯೋಜನೆಗಳನ್ನು ತಲೆಕೆಳಗೆ ಮಾಡಿತ್ತು. ಈಗ ಹರಿಯಾಣ ಸಮೀಪದ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಅಕ್ಷರಶಃ ದಿಕ್ಕು ಕಾಣದ ನಾವಿಕರಾಗಿದ್ದಾರೆ.
ಅನೇಕ ಕಡೆ ಬರಗಾಲ ಆವರಿಸಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಬರ, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನರು ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಕ್ಷೇತ್ರದಲ್ಲಿದ್ದು ಜನತೆಯ ಕುಂದುಕೊರತೆಗಳನ್ನು ಆಲಿಸಬೇಕಿತ್ತು.ಆದರೆ ಐಷಾರಾಮಿ ರೆಸಾರ್ಟ್ನಲ್ಲಿ ಉಳಿದುಕೊಂಡು ಮೋಜು ಮಸ್ತಿ ಮಾಡುತ್ತಿದ್ದೇವೆ ಎಂಬ ಆಪಾದನೆಗೂ ಗುರಿಯಾಗಿದ್ದೇವೆ. ಯಾವ ಮುಖ ಇಟ್ಟುಕೊಂಡು ಕ್ಷೇತ್ರಕ್ಕೆ ಹೋಗಬೇಕೆಂದು ಶಾಸಕರೇ ಚಿಂತಾಕ್ರಾಂತರಾಗಿದ್ದಾರೆ.