ನೆಲಮಂಗಲ: ಪಟ್ಟಣದಲ್ಲಿರುವ ಮಾಂಸದ ಅಂಗಡಿಗಳ ಮೇಲೆ ಧಿಡೀರ ದಾಳಿ ನಡೆಸಿದ ಕಾರ್ಮಿಕ ನಿರೀಕ್ಷರ ಹಾಗೂ ಸಿಡಿಪಿಒ ಅಧಿಕಾರಿಗಳ ತಂಡ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಾಲ ಕಾರ್ಮಿಕ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ಎರಡು ಮಳಿಗೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣದ ಕುಣಿಗಲ್ ಬೈಪಾಸ್ನಲ್ಲಿರುವ ಎ-ಒನ್ ಫಿಶ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ 11 ವರ್ಷದ ಬಾಲಕ ಹಾಗೂ ಸೊಂಡೆಕೊಪ್ಪದ ಮಂಜುನಾಥ್ ಎಂಬುವವರಿಗೆ ಸೇರಿದ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 13 ವರ್ಷದ ಬಾಲಕನನ್ನು ರಕ್ಷಿಸಿದ್ದಾರೆ.
ರಕ್ಷಣೆ ಮಾಡಲಾದ ಇಬ್ಬರು ಬಾಲಕರು ಮನೆಯಲ್ಲಿ ಬಡತನವಿದ್ದ ಕಾರಣಕ್ಕೆ ಶಾಲೆ ಬಿಟ್ಟು ಮಾಂಸದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕರನ್ನು ರಕ್ಷಿಸಿದ ಅಧಿಕಾರಿಗಳ ವಿರುದ್ಧವೇ ಬಾಲಕರ ಪೋಷಕರು ವಾಗ್ವಾದ ನಡೆಸಿದ್ದಾರೆ ಎನ್ನಲಾಗುತ್ತಿದೆ.