ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭಿಸಿರುವ ಬಿಜೆಪಿ ಮೂರು ಹಂತದ ಯೋಜನೆ ರೂಪಿಸಿದ್ದು, ಈಗಾಗಲೇ ಪ್ಲಾನ್ ಎ ಸಕ್ಸಸ್ ಆಗಿದೆ. ಪ್ಲಾನ್ ಬಿ ಸಕ್ಸಸ್ ಮಾಡಲು ಸರ್ಕಸ್ ಆರಂಭಿಸಿದ್ದು, ಸದ್ದಿಲ್ಲದೇ ಎರಡನೇ ಹಂತದ ಯೋಜನೆ ಪೂರ್ಣಗೊಳಿಸುವತ್ತಾ ಸಾಗಿದೆ.
ಹೌದು, ಮೈತ್ರಿ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಹರಿಯಾಣದ ಗುರುಗ್ರಾಮದ ಹೋಟೆಲ್ನಲ್ಲಿ ಬಿಜೆಪಿ ಶಾಸಕರನ್ನು ಇರಿಸಿರುವ ಬಿಜೆಪಿ ಹೈಕಮಾಂಡ್ ಇದರ ಜೊತೆ ಜೊತೆಯಲ್ಲಿಯೇ ಮೂರು ಹಂತದ ಯೋಜನೆ ರೂಪಿಸಿ ಅಖಾಡಕ್ಕಿಳಿದಿದೆ.
ಮೂರು ಹಂತದ ಯೋಜನೆಗಳೇನು?
ಪ್ಲಾನ್ ಎ- ಪಕ್ಷೇತರ ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವಂತೆ ಮಾಡುವುದು.
ಪ್ಲಾನ್ ಬಿ- ಕಾಂಗ್ರೆಸ್ನ 6 ಶಾಸಕರಿಂದ ರಾಜೀನಾಮೆ ಕೊಡಿಸುವುದು.
ಪ್ಲಾನ್ ಸಿ- ಕಾಂಗ್ರೆಸ್ನ 5-7 ಶಾಸಕರಿಂದ ರಾಜೀನಾಮೆ ಕೊಡಿಸುವುದು.
ಮೂರು ಪ್ಲಾನ್ಗಳಲ್ಲಿ ಪ್ಲಾನ್ ಎ ಈಗಾಗಲೇ ಸಕ್ಸಸ್ ಆಗಿದ್ದು, ಪ್ಲಾನ್ ಬಿ ಸಕ್ಸಸ್ ಮಾಡಲು ಬಿಜೆಪಿ ಹೈಕಮಾಂಡ್ ಸರ್ಕಸ್ ಮಾಡುತ್ತಿದೆ. ಈಗಾಗಲೇ ಮುಂಬೈನ ರೆನಾಸೆನ್ಸ್ ಹೋಟೆಲ್ ನಲ್ಲಿ ಕಾಂಗ್ರೆಸ್ ಬಂಡಾಯ ಶಾಸಕರು ತಂಗಿದ್ದು, ಈ ತಂಡಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕೂಡ ಬಂದು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಹೇಗಾದರೂ ಮಾಡಿ ಬೆಳಗ್ಗೆ ಆರು ಶಾಸಕರಿಂದ ರಾಜೀನಾಮೆ ಕೊಡಿಸುವ ಯತ್ನ ನಡೆಸುತ್ತಿದೆ. ಇದು ಬಿಜೆಪಿಗೆ ಸವಾಲಾಗಿದ್ದು, ಇಲ್ಲಿ ಸಕ್ಸಸ್ ಆದರೆ ಬಿಜೆಪಿಯ ಹಾದಿ ಸುಗಮವಾಗಲಿದೆ.