ಬೆಂಗಳೂರು, ಜ.16-ವೃದ್ಧರ ಬಗ್ಗೆ ಕಾಳಜಿ ವಹಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 70 ರ ವಯೋವೃದ್ಧರೊಬ್ಬರು ಇದೇ ಜ.21 ರಂದು ಚೆನ್ನೈನಿಂದ ದೇಶಾದ್ಯಂತ 4 ಸಾವಿರ ಕಿ.ಮೀ ಸೈಕಲ್ ಜಾಥಾ ಆರಂಭಿಸಿದ್ದು, ದೆಹಲಿಯಲ್ಲಿ ಮುಕ್ತಾಯಗೊಳ್ಳಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಹೆಲ್ಪೇಜ್ ಇಂಡಿಯಾದ ಮುಖ್ಯಸ್ಥೆ ರೇಖಾಶರ್ಮಾ ಮಾಹಿತಿ ನೀಡಿ, ಬೆಂಗಳೂರಿನ ಹರಿ ಭಾಸ್ಕರನ್ ಅವರು ಉದ್ಯಮ ಕ್ಷೇತ್ರದ ನಾಯಕರಾಗಿದ್ದು, ವೃದ್ಧರ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಿ ಜಾಗೃತಿ ಜಾಥಾ ನಡೆಸಲಿದ್ದಾರೆ.
ಜ.30 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಜಾಥಾ ಫೆ.6 ರವರೆಗೆ ಕರ್ನಾಟಕದಲ್ಲಿ ನಡೆಯಲಿದ್ದು, ಈ ಹಿಂದೆ ಅವರು ರಾಜಸ್ಥಾನದ ಡೆಸರ್ಟ್ 500 ಈವೆಂಟ್‍ನಲ್ಲಿ ಭಾಗವಹಿಸಿ ಕ್ಯಾನ್ಸರ್ ಪೀಡಿತ ಮಕ್ಕಳ ಪುನರ್ವಸತಿ ಉದ್ದೇಶಕ್ಕಾಗಿ 250 ಕಿ.ಮೀ.ಗಳ ದೂರ ಸೈಕಲ್‍ನಲ್ಲಿ ಕ್ರಮಿಸಿದ್ದರು.
ವೃದ್ಧರ ಯೋಗಕ್ಷೇಮ ಅವಶ್ಯಕವಾಗಿರುವುದರಿಂದ 2010ರಲ್ಲಿ ಭಾರತದಲ್ಲಿ ವೃದ್ಧರ ಸಂಖ್ಯೆ 91.6 ಮಿಲಿಯನ್‍ಗಿಂತಲೂ ಅಧಿಕವಾಗಿತ್ತು.ಆದರೆ 2025ರ ವೇಳೆಗೆ 158.7 ಮಿಲಿಯನ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ವೃದ್ಧರಲ್ಲಿನ ಅರ್ಧ ಭಾಗದಷ್ಟು ಜನರು ಬಹುಪಾಲು ಸ್ತ್ರೀಯರೇ ಆಗಿದ್ದಾರೆ.ತಮ್ಮ ಭಾವನಾತ್ಮಕ ಬೆಂಬಲವಿಲ್ಲದಿರುವುದು, ಮೌಖಿಕ ನಿಂದನೆ, ದೈಹಿಕ ಕಿರುಕುಳ, ತಾತ್ಸಾರ ಹಾಗೂ ಅಗೌರವಗಳಿಂದಾಗಿ ಬಹುಪಾಲು ವೃದ್ಧರನ್ನು ವೃದ್ಧಾಶ್ರಮಗಳಿಗೆ ಬಲವಂತವಾಗಿ ಸೇರ್ಪಡೆ ಮಾಡಲಾಗುತ್ತಿದೆ.ಇಂತಹ ದುರಂತ ಸಂಗತಿಗಳಿಗೆ ತಿಲಾಂಜಲಿ ಹೇಳಲು ಭಾಸ್ಕರನ್ ಅವರು ಜಾಥಾ ಹಮ್ಮಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.